ರಾಷ್ಟ್ರೀಯ

‘ಪತ್ನಿ ಜೊತೆಗಿರಿಸಿಕೊಳ್ಳುವಂತೆ’ ನ್ಯಾಯಾಲಯಗಳು ಪತಿಗೆ ಒತ್ತಾಯಿಸುವಂತಿಲ್ಲ: ಸುಪ್ರೀಂ ಕೋರ್ಟ್

Pinterest LinkedIn Tumblr

ನವದೆಹಲಿ: ತನ್ನ ‘ಪತ್ನಿಯನ್ನು ಜೊತೆಗಿರಿಸಿಕೊಳ್ಳುವಂತೆ’ ನ್ಯಾಯಾಲಯಗಳು ಪತಿಯನ್ನು ಬಲವಂತಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವರದಕ್ಷಿಣೆ ಕಿರುಕುಳ ಪ್ರಕರಣ ಸಂಬಂಧ ಈ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ಪರಿತ್ಯಕ್ತ ಪತ್ನಿ ಮತ್ತು ಮಗನಿಗಾಗಿ 10 ಲಕ್ಷ ರೂ.ಗಳ ಮಧ್ಯಂತರ ಜೀವನಾಂಶವನ್ನು ಠೇವಣಿಯಿರಿಸುವಂತೆ ವ್ಯಕ್ತಿಗೆ ಆದೇಶಿಸಿದೆ.

ವೃತ್ತಿಯಲ್ಲಿ ಪೈಲಟ್ ಆಗಿರುವ ತಮಿಳುನಾಡು ವ್ಯಕ್ತಿ ವಿರುದ್ಧ ಆತನ ಪತ್ನಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದರು. ಈ ಸಂಬಂಧ ಪತಿಯನ್ನು ಬಂಧಿಸಿದ್ದ ಪೊಲೀಸರು ಮದ್ರಾಸ್ ಹೈಕೋರ್ಟ್ ಪೀಠದ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ಪತಿಯು ರಾಜಿ ಒಪ್ಪಂದವನ್ನು ಪಾಲಿಸಲು ನಿರಾಕರಿಸಿದ ಬಳಿಕ ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠವು ಆತನ ಜಾಮೀನನ್ನು ರದ್ದುಗೊಳಿಸಿತ್ತು.

ಮದ್ರಾಸ್ ಪೀಠದ ಕ್ರಮವನ್ನು ಪ್ರಶ್ನಿಸಿ ಪತಿ ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಆರ್ಜಿ ದಾಖಲಿಸಿದ್ದರು. ಈ ಆರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮದ್ರಾಸ್ ಹೈಕೋರ್ಟ್ ನ್ಯಾಯಾಲಯದ ಅದೇಶವನ್ನು ಎತ್ತಿ ಹಿಡಿದಿದ್ದಲ್ಲದೇ 10 ಲಕ್ಷ ರೂ. ಠೇವಣಿ ಇಡದ ಹೊರತು ಜಾಮೀನು ಮಂಜೂರು ಮಾಡುವುದಿಲ್ಲ ಎಂದು ಹೇಳಿದೆ. ಅಂತೆಯೇ ತನ್ನ ‘ಪತ್ನಿಯನ್ನು ಜೊತೆಗಿರಿಸಿಕೊಳ್ಳುವಂತೆ’ ನ್ಯಾಯಾಲಯಗಳು ಪತಿಯನ್ನು ಬಲವಂತಗೊಳಿಸುವಂತಿಲ್ಲ. ಇದು ಮಾನವ ಸಂಬಂಧಗಳ ಪ್ರಶ್ನೆಯಾಗಿದೆ ಎಂದು ಸ್ಪಷ್ಟಪಡಿಸಿದೆ.

ಅಲ್ಲದೆ ಠೇವಣಿಯಿರಿಸಿದ ಹಣವನ್ನು ಬೇಷರತ್ ಆಗಿ ತನ್ನ ತಕ್ಷಣದ ಅಗತ್ಯಕ್ಕಾಗಿ ಬಳಸಿಕೊಳ್ಳಲು ಪತ್ನಿಯು ಸ್ವತಂತ್ರಳಿದ್ದಾಳೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಆದರ್ಶ ಗೋಯೆಲ್ ಮತ್ತು ಯು.ಯು.ಲಲಿತ್ ಅವರ ಪೀಠವು ಸ್ಪಷ್ಟಪಡಿಸಿದೆ. ಅಂತೆಯೇ ಠೇವಣಿ ಮೊತ್ತವನ್ನು ಕಡಿಮೆ ಮಾಡುವಂತೆ ಪತಿಯ ಪರ ವಕೀಲರು ಮನವಿ ಮಾಡಿದಾಗ, ‘ಇದು ಕುಟುಂಬ ನ್ಯಾಯಾಲಯವಲ್ಲ ಮತ್ತು ಇಲ್ಲಿ ಯಾವುದೇ ಚೌಕಾಶಿ ನಡೆಯುವುದಿಲ್ಲ ಎಂದು ಹೇಳಿದ ನ್ಯಾಯಾಧೀಶರು, 10 ಲಕ್ಷ ರೂ.ಗಳನ್ನು ತಕ್ಷಣವೇ ವಿಚಾರಣಾ ನ್ಯಾಯಾಲಯದಲ್ಲಿ ಠೇವಣಿಯಿರಿಸಲು ಒಪ್ಪಿಕೊಂಡರೆ ಜಾಮೀನನ್ನು ಮರು ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.

Comments are closed.