ರಾಷ್ಟ್ರೀಯ

ಧನದಾಹಿ ಆಸ್ಪತ್ರೆಗಳ ಲೂಟಿಗೆ ಬ್ರೇಕ್‌: ಎಲ್ಲ ರಾಜ್ಯಗಳಿಗೆ ಕೇಂದ್ರ ಸೂಚನೆ

Pinterest LinkedIn Tumblr


ಹೊಸದಿಲ್ಲಿ: ರೋಗಿಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಸೇರಿದಂತೆ ಅಕ್ರಮಗಳನ್ನು ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲ ವೈದ್ಯಕೀಯ ಸಂಸ್ಥೆಗಳಿಗೆ ಕಠಿಣ ಎಚ್ಚರಿಕೆ ನೀಡುವಂತೆ ಮತ್ತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚನೆ ನೀಡಿದೆ.

ಗುರುಗ್ರಾಮದ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಏಳು ವರ್ಷದ ಬಾಲಕಿ ಆದ್ಯಾಳ ಡೆಂಗೆ ಚಿಕಿತ್ಸೆಗೆ 15 ದಿನದಲ್ಲಿ 16 ಲಕ್ಷ ರೂ. ಬಿಲ್‌ ಮಾಡಿದ ಮತ್ತು ಆಕೆಯ ಶವ ಮೇಲಿನ ಗೌನಿಗೂ ಹಣ ವಸೂಲಿ ಮಾಡಿದ ವಿದ್ಯಮಾನ ಭಾರಿ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ ಕೇಂದ್ರದಿಂದ ಈ ಸೂಚನೆ ಹೊರಬಿದ್ದಿದೆ.

ಫೋರ್ಟಿಸ್‌ ಪ್ರಕರಣ ನಡೆಯುವ ಮೊದಲೇ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳ ಅಕ್ರಮ ತಡೆಯುವ ಉದ್ದೇಶ ಹೊಂದಿರುವ ಕೆಪಿಎಂಇ ತಿದ್ದುಪಡಿ ವಿಧೇಯಕ ಮಂಡಿಸಲಾಗಿತ್ತು. ಆದರೆ, ವೈದ್ಯರ ಮುಷ್ಕರಕ್ಕೆ ಮಣಿದು ಅದನ್ನು ದುರ್ಬಲಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. ಇದೀಗ ಕೇಂದ್ರ ಸರಕಾರದ ಸೂಚನೆ ಹೊಸ ಭರವಸೆ ಮೂಡಿಸಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದನ್‌ ಅವರು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಆಸ್ಪತ್ರೆಗಳು ಅಕ್ರಮ ನಡೆಸುವುದರಿಂದ ರೋಗಿಯ ಸುರಕ್ಷತೆಯಲ್ಲಿ ರಾಜಿ ಮಾಡಿಕೊಂಡಂತಾಗುತ್ತದೆ. ಜತೆಗೆ ಆರೋಗ್ಯ ರಕ್ಷಣೆ ವೆಚ್ಚಗಳ ಉತ್ತರದಾಯಿತ್ವದ ಬಗ್ಗೆಯೂ ಕಳವಳ ಮೂಡಿಸುತ್ತದೆ ಎಂದಿದ್ದಾರೆ.

”ಫೋರ್ಟಿಸ್‌ನಂಥ ಘಟನೆಗಳಿಂದ ಪಾಠ ಕಲಿಯಲು ಇದು ಸಕಾಲ. ಹಾಗಾಗಿ, ಖಾಸಗಿಯೂ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಎಲ್ಲ ಸಂಸ್ಥೆಗಳ ಸಭೆ ಕರೆದು ಇಂಥ ಅಕ್ರಮ ಕೃತ್ಯಗಳಿಗೆ ಕೈ ಹಾಕದಂತೆ ಎಚ್ಚರಿಕೆ ನೀಡಬೇಕು ಮತ್ತು ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಬೇಕು,” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅಕ್ರಮಗಳೇನು?

ವಿಪರೀತ ಬಿಲ್‌ ವಸೂಲಿ, ಸೇವೆಗಳಲ್ಲಿ ನ್ಯೂನತೆ, ಗುಣಮಟ್ಟದ ಚಿಕಿತ್ಸಾ ವಿಧಾನಗಳನ್ನು ಪಾಲಿಸದಿರುವುದು, ಆರೋಗ್ಯ ವೆಚ್ಚದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಕಾಪಾಡದೆ ಇರುವುದೇ ಮೊದಲಾದ ಅಕ್ರಮಗಳನ್ನು ಕೇಂದ್ರ ಆರೋಗ್ಯ ಇಲಾಖೆ ಗುರುತಿಸಿದೆ.

ಇಂಥ ಕೃತ್ಯಗಳು ದೇಶದ ಆರೋಗ್ಯ ಸುರಕ್ಷತಾ ವ್ಯವಸ್ಥೆಯ ಮೇಲೆ ಜನರು ಇಟ್ಟಿರುವ ನಂಬಿಕೆ ಕುಸಿಯುವಂತೆ ಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ವಿಧೇಯಕದಲ್ಲಿ ಏನಿದೆ?

2010ರ ವಿಧೇಯಕದಲ್ಲಿ ಡೆಂಗೆ, ಚಿಕೂನ್‌ಗುನ್ಯ ಮತ್ತು ಮಲೇರಿಯ ಸೇರಿದಂತೆ 227 ರೋಗಗಳ ಚಿಕಿತ್ಸಾ ಮಾರ್ಗದರ್ಶಿಗಳನ್ನು ನಮೂದಿಸಲಾಗಿದೆ. ಆಸ್ಪತ್ರೆಗಳು ಮೂಲಸೌಕರ್ಯ, ಸೇವೆ, ಸಿಬ್ಬಂದಿ, ಸಲಕರಣೆಗಳನ್ನು ಹೊಂದಿರಬೇಕು ಎಂದು ಸೂಚಿಸಲಾಗಿದೆ.

ರೋಗಗಳ ಚಿಕಿತ್ಸೆಗೆ ವಿಧಿಸಬಹುದಾದ ದರ ಮತ್ತು ವಿಧಾನಗಳನ್ನು ನಿಗದಿಪಡಿಸಲು ಒಂದು ತಾಂತ್ರಿಕ ಸಮಿತಿಯನ್ನು ನೇಮಿಸಬೇಕಾಗುತ್ತದೆ.

ಇದುವರೆಗೆ ಅರುಣಾಚಲ ಪ್ರದೇಶ, ರಾಜಸ್ಥಾನ, ಜಾರ್ಖಂಡ್‌, ಅಸ್ಸಾಂಗಳಲ್ಲಿ ಮಾತ್ರ ಈ ವಿಧೇಯಕ ಅನುಷ್ಠಾನವಾಗಿದೆ. ಸಿಕ್ಕಿಂ, ಮಿಝೋರಾಂ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಇದನ್ನು ಅಂಗೀಕರಿಸಿದ್ದರೂ ಜಾರಿಯಾಗಿಲ್ಲ.

ಕಡಿವಾಣಕ್ಕೆ ಸೂತ್ರಗಳು
* ಎಲ್ಲ ರಾಜ್ಯ ಸರಕಾರಗಳು ಆರೋಗ್ಯ ರಕ್ಷಣಾ ಸಂಸ್ಥೆಗಳ (ನೋಂದಣಿ ಮತ್ತು ನಿಯಂತ್ರಣ) ವಿಧೇಯಕ 2010ನ್ನು ಜಾರಿಗೊಳಿಸಿ ಎಲ್ಲ ಆಸ್ಪತ್ರೆಗಳಿಗೆ ಕಡಿವಾಣ ಹಾಕಬೇಕು.
* ಆಸ್ಪತ್ರೆಗಳಸಭೆ ಕರೆದು ಎಚ್ಚರಿಕೆ ನೀಡಬೇಕು, ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳಬೇಕು.

Comments are closed.