ರಾಷ್ಟ್ರೀಯ

ತಮಿಳುನಾಡು: ಮುಂದುವರಿದ ಪ್ರವಾಹ ಪರದಾಟ

Pinterest LinkedIn Tumblr


ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ಹಾಗೂ ಇತರ ಕರಾವಳಿ ಪ್ರದೇಶಗಳಲ್ಲಿ ವರುಣನ ಭೋರ್ಗರೆತ ನಿರಂತರವಾಗಿ ಮುಂದುವರಿದಿದ್ದು, ಅಕ್ಟೋಬರ್‌ 1ರಿಂದ ನವೆಂಬರ್‌ 4 ನಡುವಿನ ಅವಧಿಯಲ್ಲಿ ಮಹಾನಗರಪಾಲಿಕೆಯಲ್ಲಿ ಶೇಕಡ 93ರಷ್ಟು ಮಳೆ ಸುರಿದಿದೆ ಎಂದು ಅಂಕಿ-ಅಂಶಗಳು ದೃಢಪಡಿಸಿವೆ.

ವಾಯುಭಾರತ ಕುಸಿತ, ಬಂಗಾಳ ಕೊಲ್ಲಿಯಲ್ಲಿ ಬೀಸುತ್ತಿರುವ ಚಂಡಮಾರುತದ ಪರಿಣಾಮ ಮಳೆಯ ಆರ್ಭಟ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಸುಳಿವು ನೀಡಿದೆ. ಶನಿವಾರ, ಚೆನ್ನೈ ಹಾಗೂ ಕರಾವಳಿ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಹಗುರದಿಂದ ಸಾಧಾರಣ ಮಳೆ ಬಿದ್ದ ಬಗ್ಗೆ ವರದಿಯಾಗಿದೆ.

ಅಕ್ಟೋಬರ್‌ 27ರಂದು ಈಶಾನ್ಯ ಮಾರುತ ಬಿರುಸುಗೊಂಡಂದಿನಿಂದ ರಾಜ್ಯದ ವಿವಿಧೆಡೆ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅಕ್ಟೋಬರ್‌ 1ರಿಂದ ನವೆಂಬರ್‌ 4ರವರೆಗಿನ ಅವಧಿಯಲ್ಲಿ ವಾಡಿಕೆಯ 21 ಸೆಂ.ಮೀ. ಬದಲು 19 ಸೆಂ.ಮೀ. ಮಳೆಯಾಗಿದೆ ಎಂದು ‘ಏರಿಯಾ ಸೈಕ್ಲೋನ್‌ ವಾರ್ನಿಂಗ್‌ ಸೆಂಟರ್‌’ನ ನಿರ್ದೇಶಕ ಎಸ್‌. ಬಾಲಚಂದ್ರನ್‌ ತಿಳಿಸಿದ್ದಾರೆ.

ಕರಾವಳಿ ಪ್ರದೇಶಗಳಲ್ಲಿ ಮುಂದಿನ ಎರಡು ಮೂರು ದಿನಗಳಲ್ಲಿ ಮಳೆಯ ಪ್ರಮಾಣ ತಗ್ಗುವ ಸಾಧ್ಯತೆಗಳಿವೆ.

ಶುಕ್ರವಾರ ಹಾಗೂ ಶನಿವಾರ ತಮಿಳುನಾಡು ಹಾಗೂ ಪಾಂಡಿಚೆರಿಯಲ್ಲಿ ಕರಾವಳಿ ಹಾಗೂ ಒಳನಾಡು ಜಿಲ್ಲೆಗಳ ಕೆಲವೆಡೆ ಧಾರಾಕಾರ ಮಳೆ ಸುರಿದಿತ್ತು ಎಂದು ಬಾಲಚಂದ್ರನ್‌ ತಿಳಿಸಿದ್ದಾರೆ.

ಎಡೆಬಿಡದೆ ಸುರಿದ ಮಳೆಯಿಂದಾಗಿ ಬಸ್ಸು ಹಾಗೂ ರೈಲು ಸಂಚಾರ ವ್ಯತ್ಯಯಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. ಕೆಲವೆಡೆ ವಾಹನ ಸಂಚಾರ ಬಸವನ ಹುಳುವಿನ ಚಲನೆಯನ್ನು ನೆನಪಿಸುವಂತಿತ್ತು.

ಶಾಲಾ-ಕಾಲೇಜುಗಳಿಗೆ ಶನಿವಾರವೂ ರಜೆ ಘೋಷಿಸಲಾಗಿತ್ತು. ಅಂತೆಯೇ ಕೆಲವು ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ಮುಂದೂಡಿವೆ.

ಶನಿವಾರ ನಡೆಯಬೇಕಿದ್ದ ರಾಜ್ಯಮಟ್ಟದ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯನ್ನು ನವೆಂಬರ್‌ 18ಕ್ಕೆ ಮುಂದೂಡಲಾಗಿದೆ.

Comments are closed.