ರಾಷ್ಟ್ರೀಯ

ಲಖನೌ-ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಇಳಿದ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು !

Pinterest LinkedIn Tumblr

ಆಗ್ರಾ: ಭಾರತೀಯ ವಾಯುಸೇನೆಯ ಬಹು ನಿರೀಕ್ಷಿತ ಯುದ್ಧ ವಿಮಾನಗಳ ಹೆದ್ದಾರಿಯಲ್ಲಿ ಭೂಸ್ಪರ್ಶ ತರಬೇತಿ ಕಾರ್ಯ ಉತ್ತರ ಪ್ರದೇಶದ ಲಖನೌ-ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಯಶಸ್ವಿಯಾಗಿ ಆರಂಭಗೊಂಡಿದೆ.

ಭಾರತೀಯ ವಾಯುಪಡೆ, ಉತ್ತರ ಪ್ರದೇಶ ಸರ್ಕಾರದ ಸಹಯೋಗದಲ್ಲಿ ಕೈಗೊಂಡಿರುವ ಕಾರ್ಯಾಚರಣೆಯ ತಾಲೀಮಿನ ಭಾಗವಾಗಿ 32 ಟ್ರಾಸ್ಪೋರ್ಟ್ ವಿಮಾನಗಳು, ಎಸ್ ಯು-30 ಸೇರಿದಂತೆ ಐಎಎಫ್ ನ ಮುಂಚೂಣಿಯಲ್ಲಿರುವ ಫೈಟರ್ ಜೆಟ್ ಗಳು ಹಾಗೂ ಮಿರಾಜ್-2000 ವಿಮಾನಗಳು ಹೆದ್ದಾರಿಯಲ್ಲಿ ಭೂಸ್ಪರ್ಶ ಮಾಡುತ್ತಿವೆ. ಈಗಾಗಲೇ ವಾಯುಸೇನೆಯ ಅತ್ಯಾಧುನಿಕ ಯುದ್ಧ ವಿಮಾನಗಳಾದ ಮಿರಾಜ್ 2000, ಸುಖೋಯ್, ಮಿಗ್ ಸರಣಿಯ ವಿಮಾನಗಳು ಇಳಿದಿದ್ದು, ಸೇನೆಯ ಅತ್ಯಂತ ದೊಡ್ಡ ಮತ್ತು ಸರಕು ಸಾಗಣಾ ಜಂಬೋ ವಿಮಾನ ಹರ್ಕ್ಯುಲಸ್ ಸಿ-130 ಯುದ್ಧ ವಿಮಾನ ಕೂಡ ಯಶಸ್ವಿಯಾಗಿ ಭೂಸ್ಪರ್ಶ ಮಾಡಿದೆ.

ಕಾರ್ಯಾಚರಣೆಯ ತಾಲೀಮಿಗಾಗಿ ನಿನ್ನೆ ಸಂಜೆಯಿಂದಲೇ ಲಖನೌ-ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಅಲ್ಲದೆ ಭದ್ರತೆಯನ್ನೂ ಕೂಡ ನಿಯೋಜಿಸಲಾಗಿತ್ತು. ಸೇನೆಯ ಗರುಡ ಕಮಾಂಡೋಗಳು ಸೇನೆಯ ಈ ತರಬೇತಿಗೆ ಭದ್ರತೆಗೆ ನಿಯೋಜಿಸಲಾಗಿತ್ತು. ತರಬೇತಿ ವೇಳೆ ಸೇನೆಯ ಮಿರಾಜ್ 2000, ಸುಖೋಯ್-30 ಎಂಕೆ ಐ, ಹರ್ಕುಲಸ್ ಸಿ-130 ಸೇರಿದಂತೆ ಸೇನೆಯ ಒಟ್ಟು 4 ಯುದ್ಧ ವಿಮಾನಗಳು ಹೈವೇಯಲ್ಲಿ ಭೂಸ್ಪರ್ಶ ಮಾಡಲಿವೆ.

ಸೇನಾ ತುರ್ತು ಸಂದರ್ಭಗಳಲ್ಲಿ ಸೇನಾಪಡೆಯ ರನ್ ವೇ ಗಳಿಗಾಗಿ ಕಾಯದೇ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಯುದ್ಧ ವಿಮಾನಗಳನ್ನು ಇಳಿಸುವ ಮತ್ತು ಟೇಕ್ ಆಫ್ ಮಾಡುವ ಸಂಬಂಧ ಈ ಹಿಂದೆ ಸೇನಾಧಿಕಾರಿಗಳು ಯೋಜನೆ ರೂಪಿಸಿದ್ದರು. ಅದರಂತೆ ಹೆದ್ದಾರಿಗಳಲ್ಲಿ ಫೈಟರ್ ಜೆಟ್ ಗಳನ್ನು ಇಳಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ 2016 ರ ಮೇ 21 ರಂದು ಮಿರಾಜ್-2000 ಫೈಟರ್ ವಿಮಾನವನ್ನು ಯಮುನಾ ಎಕ್ಸ್ ಪ್ರೆಸ್ ನಲ್ಲಿ ಲ್ಯಾಂಡ್ ಮಾಡಲಾಗಿತ್ತು.

ಇದೇ ಮಾದರಿಯಲ್ಲಿ ಫೈಟರ್ ಜೆಟ್ ಗಳನ್ನು ಲ್ಯಾಂಡ್ ಮಾಡಿಸಲು 12 ಹೈವೆ ಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಮೂರು ಹೆದ್ದಾರಿಗಳು ನಕ್ಸಲರು ಹೆಚ್ಚಿರುವ ಹಾಗೂ ಪದೇ ಪದೇ ಪ್ರವಾಹ ಉಂಟಾಗುವ ಒಡಿಶಾ, ಜಾರ್ಖಂಡ್, ಚತ್ತೀಸ್ ಘಢವನ್ನು ಸಂಪರ್ಕಿಸುತ್ತವೆ. ಈ ಹೆದ್ದಾರಿಗಳನ್ನು ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Comments are closed.