ಕರ್ನಾಟಕ

ಟಿಪ್ಪು ಜಯಂತಿ: ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಟಿಪ್ಪು ವಂಶಸ್ಥರ ಆಗ್ರಹ

Pinterest LinkedIn Tumblr

ಬೆಂಗಳೂರು: ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್ ಅವರನ್ನು ಸಾಮೂಹಿಕ ಅತ್ಯಾಚಾರಿ ಎನ್ನುವ ಮೂಲಕ ಅವರ ಹೆಸರಿಗೆ ಕಳಂಕ ಹಚ್ಚಲು ಮುಂದಾಗಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಟಿಪ್ಪು ವಂಶಸ್ಥ ಮನ್ಸೂರ್ ಅಲಿ ಟಿಪ್ಪು ಆಗ್ರಹಿಸಿದ್ದಾರೆ.

ಖ್ಯಾತ ಉಧ್ಯಮಿ ಕೂಡ ಆಗಿರುವ ಟಿಪ್ಪು ವಂಶಸ್ಥ ಸಾಹಬ್ಜಾದಾ ಮನ್ಸೂರ್ ಅಲಿ ಟಿಪ್ಪು ಅವರು ಇತ್ತೀಚೆಗಿನ ಟಿಪ್ಪು ಜಯಂತಿ ಕುರಿತ ವಿವಾದಗಳು ತಮಗೆ ತೀವ್ರ ನೋವನ್ನುಂಟು ಮಾಡಿದೆ. ಪ್ರಮುಖವಾಗಿ ಟಿಪ್ಪು ಸುಲ್ತಾನ್ ಅವರನ್ನು ಸಾಮೂಹಿಕ ಅತ್ಯಾಚಾರಿ ಎಂದು ಟೀಕಿಸಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಕೂಡಲೇ ಬಹಿರಂಗ ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಂತೆಯೇ ಈ ಬಗ್ಗೆ ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದೇನೆ ಎಂದೂ ಮನ್ಸೂರ್ ಅಲಿ ಟಿಪ್ಪು ಹೇಳಿದ್ದಾರೆ. ಸಚಿವರ ಭೇಟಿ ಬಳಿಕ ದೂರು ನೀಡುವ ಕುರಿತು ಮನ್ಸೂರ್ ಅಲಿ ಟಿಪ್ಪು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಟಿಪ್ಪು ವಂಶಸ್ಥನಾಗಿ ಅವರ ವಿರುದ್ಧದ ಸುಳ್ಳು ಆರೋಪಗಳನ್ನು ನಾವು ಸಹಿಕೊಳ್ಳಲು ಅಸಾಧ್ಯ. ಹೀಗಾಗಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ದೂರು ನೀಡಿತ್ತಿರುವುದಾಗಿ ಮನ್ಸೂರ್ ಅಲಿ ಟಿಪ್ಪು ಹೇಳಿದ್ದಾರೆ.

ಟಿಪ್ಪು ಸುಲ್ತಾನ್ ಬ್ರಿಟೀಷರ ದಬ್ಬಾಳಿಕೆಯನ್ನು ವಿರೋಧಿಸಿದ ಪ್ರಮುಖ ರಾಜ.. ಇಂತಹವರ ಇತಿಹಾಸ ತಿಳಿಯದೇ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಕೇಂದ್ರ ಸಚಿವ ಸ್ಥಾನದಲ್ಲಿರುವ ಅನಂತ್ ಕುಮಾರ್ ಹೆಗ್ಡೆ ತಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು. ಕರ್ನಾಟಕದಲ್ಲಿ ಇಂದಿಗೂ ಟಿಪ್ಪು ಸುಲ್ತಾನ್ ಅವರನ್ನು ಮೈಸೂರು ಹುಲಿ ಎಂದು ಕರೆಯುತ್ತಾರೆ. ಇಂತಹ ವ್ಯಕ್ತಿಯ ವಿರುದ್ಧ ಅವಹೇಳನ ಮಾಡುವುದು ಸರಿಯಲ್ಲ. ಕೂಡಲೇ ಅನಂತ್ ಕುಮಾರ್ ಹೆಗ್ಡೆ ಅವರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಮನ್ಸೂರ್ ಅಲಿ ಟಿಪ್ಪು ಆಗ್ರಹಿಸಿದ್ದಾರೆ.

ಬೆಂಗಳೂರು ಮೂಲದ ಉಧ್ಯಮಿ ಮನ್ಸೂರ್ ಅಲಿ ಟಿಪ್ಪು ಅವರು ಟಿಪ್ಪು ಸುಲ್ತಾನ್ ವಂಶದ 7ನೇ ತಲೆಮಾರಿನವರಾಗಿದ್ದಾರೆ.

Comments are closed.