ಕರಾವಳಿ

ಕೊಲೆ ಸೇರಿದಂತೆ ಹಲವು ಪ್ರಕರಣಗಳ ಆರೋಪಿಗೆ ಪೊಲೀಸರ ಎದುರೇ ಸಾರ್ವಜನಿಕರಿಂದ ಧರ್ಮದೇಟು

Pinterest LinkedIn Tumblr

( ಕಡತ ಚಿತ್ರ )

ಉಳ್ಳಾಲ, ಅಕ್ಟೋಬರ್. 24: ಹಲವು ಪ್ರಕರಣಗಳ ಆರೋಪಿಯೊರ್ವನಿಗೆ ಪೊಲೀಸರ ಎದುರೇ ಸಾರ್ವಜನಿಕರು ಸೇರಿ ಹಲ್ಲೆ ನಡೆಸಿರುವ ಘಟನೆ ಉಳ್ಳಾಲದ ಕೋಡಿ ಎಂಬಲ್ಲಿ ಸೋಮವಾರ ತಡರಾತ್ರಿ ವೇಳೆ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಕೊಲೆ, ಗಾಂಜಾ ಸಹಿತ ಮನೆ ಹಾಗೂ ಅಂಗಡಿ ಧ್ವಂಸಗೈದ ಪ್ರಕರಣದ ಆರೋಪಿ ಕೋಡಿ ನಿವಾಸಿ ಅಬ್ದುಲ್ ಮುತಾಲಿಬ್ ಯಾನೆ ಮುತ್ತು (22) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಓರ್ವ ಪೊಲೀಸ್ ಪೇದೆಗೂ ಗಾಯವಾಗಿದೆ. ಸಾರ್ವಜನಿಕರ ಏಟಿನಿಂದ ಅಬ್ದುಲ್ ಮುತಾಲಿಬ್ ನನ್ನು ತಪ್ಪಿಸಲು ಯತ್ನಿಸಿದ ಪೇದೆ ಬಸವರಾಜ ಎಂಬವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಕಳೆದ ಕೆಲವು ವರ್ಷಗಳ ಹಿಂದೆ ಉಳ್ಳಾಲದಲ್ಲಿ ನಡೆದಿದ್ದ ರಾಜು ಕೋಟ್ಯಾನ್ ಹತ್ಯೆ ಆರೋಪಿಗಳಲ್ಲಿ ಈತನೂ ಒಬ್ಬನಾಗಿದ್ದ. ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡ ನಂತರ ತಂಡ ಕಟ್ಟಿಕೊಂಡು ಉಳ್ಳಾಲದಾದ್ಯಂತ ಮನೆ, ಅಂಗಡಿಗೆ ಹಾನಿಗೈದುದಲ್ಲದೆ, ಹಲವು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಈತನ ಪುಂಡಾಟಿಕೆಯಿಂದ ರೋಸಿ ಹೋದ ಗ್ರಾಮಸ್ಥರು ಆತನಿಗಾಗಿ ಹಲವು ದಿನಗಳಿಂದ ಹುಡುಕಾಡುತ್ತಿದ್ದರೂ, ಆತ ನಾಪತ್ತೆಯಾಗಿದ್ದ. ಸೋಮವಾರ ಸಂಜೆ ವೇಳೆ ಮುತ್ತಲೀಬ್ ಮನೆಗೆ ಬಂದಿರುವ ಮಾಹಿತಿ ತಿಳಿದ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದರು.

ಪೊಲೀಸರು ಮುತ್ತಲೀಬ್ ಮನೆಗೆ ತೆರಳಿ ಆತನನ್ನು ವಶಕ್ಕೆ ಪಡೆದು ಹೊರಕ್ಕೆ ಕರೆತರುವಷ್ಟರಲ್ಲಿ 300ಕ್ಕೂ ಹೆಚ್ಚು ಸಾರ್ವಜನಿಕರು ಮನೆಯ ಸುತ್ತ ಜಮಾಯಿಸಿ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಗಲಾಟೆ ಪ್ರಾರಂಭಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ಆರೋಪಿಯನ್ನು ವಾಹನದ ಬಳಿ ಕರೆದೊಯ್ಯುತ್ತಿದ್ದಂತೆ ಏಕಾಏಕಿ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಪೊಲೀಸರ ಕೈಯಿಂದ ಆತನನ್ನು ಎಳೆದಾಡಿ ಮಾರಣಾಂತಿಕವಾಗಿ ಥಳಿಸಿದ್ದಾರೆ. ತಡೆಯಲು ಬಂದ ಬಸವರಾಜು ಎಂಬ ಸಿಬ್ಬಂದಿಗೂ ಹಲ್ಲೆ ಮಾಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಮುತ್ತಲೀಬ್ ಮತ್ತು ಬಸವರಾಜು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದೆ.

Comments are closed.