ಅಲಿಗಢ: ಅಕ್ರಮ ನಡೆಯುವುದನ್ನು ಕಂಡರೆ ಕೂಡಲೇ ನಾನು ಸ್ಕ್ರೂ ಟೈಟ್ ಮಾಡುತ್ತೇನಲ್ಲಾ. ಹಾಗಾಗಿಯೇ ರಾಜಕೀಯ ಪಕ್ಷಗಳಿಗೆ ನನ್ನ ಮೇಲೆ ಸಿಟ್ಟು ಎಂದು ಅಲಿಗಢದಲ್ಲಿ ಬಿಜೆಪಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿನ ಮೊದಲ ಹಂತದ ಚುನಾವಣೆಗೆ ಪೂರ್ವಭಾವಿಯಾಗಿ ಇಂದು ನಡೆದ ಪ್ರಚಾರ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.
ಉತ್ತರಪ್ರದೇಶದಲ್ಲಿ ಅಧಿಕಾರ ಹೊಂದಿದ್ದ ಸರ್ಕಾರ ಯಾವ ರೀತಿ ಕೆಲಸ ಮಾಡಿತ್ತು ಎಂದರೆ ಅಲಿಗಢದಲ್ಲಿದ್ದ ಬೀಗದ ಕಾರ್ಖಾನೆಯೇ ಮುಚ್ಚಿಹೋಯಿತು ಎಂದಿದ್ದಾರೆ.
ಈ ಭಾಷಣದಲ್ಲಿಯೂ ನೋಟುರದ್ದತಿ ತೀರ್ಮಾನವನ್ನು ಸಮರ್ಥಿಸಿಕೊಂಡ ಮೋದಿ, ನೋಟು ರದ್ದತಿ ನಿರ್ಧಾರ ಸಾಕಷ್ಟು ಯೋಚಿಸಿ ತೆಗೆದುಕೊಂಡ ನಿರ್ಧಾರವೇ ಆಗಿದೆ. ನೋಟು ರದ್ದತಿಯ ನಂತರ ಬ್ಯಾಂಕ್‍ನಲ್ಲಿ ಜಮೆ ಆದ ಹಣದ ವಿವರಗಳನ್ನು ಪಡೆಯಲಾಗುತ್ತದೆ. ನ್ಯಾಯಕ್ಕಾಗಿ ನಡೆದ ಹೋರಾಟಗಳಲ್ಲಿ ನೋಟು ರದ್ದತಿಯೂ ಒಂದು. ಇಲಿಗಳಿಗೆ ಆಹಾರವಾಗಲಿದ್ದ ₹40,000 ಕೋಟಿ ಹಣವನ್ನು ನಾವು ಉಳಿಸಿದ್ದೇವೆ. ಆ ಹಣವನ್ನು ನಾವು ಜನರಿಗಾಗಿ ಬಳಸಿದ್ದೇವೆ ಎಂದಿದ್ದಾರೆ.
ಉತ್ತರಪ್ರದೇಶದಲ್ಲಿನ ಆಡಳಿತಾರೂಢ ಸಮಾಜವಾದಿ ಪಕ್ಷ ಭ್ರಷ್ಟಾಚಾರದ ಮೇಲೆ ನಿಗಾ ಇರಿಸದೇ ಇರುವ ಕಾರಣ ಇಲ್ಲಿ ಭ್ರಷ್ಟಾಚಾರ ತಾಂಡವವಾಡಿದೆ. ಅದೇ ವೇಳೆ ಸಾಲಗಳನ್ನು ತೀರಿಸುವುದಕ್ಕಾಗಿ ಈ ಸರ್ಕಾರ ರೈತರಿಗೆ ಯಾವುದೇ ಸಹಾಯ ಮಾಡಿಲ್ಲ. ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ಕಬ್ಬು ಬೆಳೆಗಾರರಿಗೆ ನೀಡಿದ ₹22,000 ಕೋಟಿ ಸಾಲದಲ್ಲಿ ಶೇ.95ನ್ನು ಮನ್ನಾ ಮಾಡುವುದಾಗಿ ಮೋದಿ ಭರವಸೆ ನೀಡಿದ್ದಾರೆ.
ಹರ್ಯಾಣ ಸರ್ಕಾರ ಕಬ್ಬು ಬೆಳೆಗಾರರ ಸಾಲ ಮನ್ನಾ ಮಾಡುವುದಾದರೆ ಉತ್ತರಪ್ರದೇಶ ಸರ್ಕಾರಕ್ಕೆ ಅದೇ ರೀತಿ ಸಾಲ ಮನ್ನಾ ಮಾಡಲು ಏನು ಕಷ್ಟ?. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಅವರ ಸರ್ಕಾರವು ರೈತರ ಹೆಸರಲ್ಲಿ ಮತ ಯಾಚನೆ ಮಾಡುತ್ತಿದ್ದರೂ, ಅವರು ಶೇ.3ರಷ್ಟು ಮಾತ್ರ ರೈತರ ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ ಎಂದಿದ್ದಾರೆ ಮೋದಿ.
Comments are closed.