ರಾಷ್ಟ್ರೀಯ

7 ಲಕ್ಷ ಜನರಿಗೆ ಬರೊಬ್ಬರಿ 3700 ಕೋಟಿ ವಂಚನೆ ಮಾಡಿದ್ದ ಬೃಹತ್ ಜಾಲ ಭೇದಿಸಿದ ಪೊಲೀಸರು; ಮೂವರ ಬಂಧನ!

Pinterest LinkedIn Tumblr

ಲಖನೌ: ಆನ್ ಲೈನ್ ಮೂಲಕ ಸುಮಾರು 7 ಲಕ್ಷ ಜನರಿಗೆ ಬರೊಬ್ಬರಿ 3700 ಕೋಟಿ ವಂಚನೆ ಮಾಡಿದ್ದ ಬೃಹತ್ ಜಾಲವನ್ನು ಉತ್ತರ ಪ್ರದೇಶ ಪೊಲೀಸರು ಭೇದಿಸಿದ್ದು, ಈ ಸಂಬಂಧ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಉತ್ತರ ಪ್ರದೇಶದ ನೊಯ್ಡಾದ ಸೆಕ್ಟರ್-63ಯಲ್ಲಿ ಎಬ್ಲೇಜ್ ಇನ್ಫೋ ಸೊಲ್ಯೂಷನ್ ಲಿಮಿಟೆಡ್ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಆನ್ ಲೈನ್ ನಲ್ಲಿ ಸುಮಾರು 7 ಲಕ್ಷ ಜನರಿಗೆ 3700 ಕೋಟಿ ವಂಚನೆ ಮಾಡಿದ್ದ ಮೂವರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ಸಿಬ್ಬಂದಿಗಳು ಬಂಧಿಸಿದ್ದಾರೆ. ಬಂಧಿತರನ್ನು ಅನುಭವ್ ಮಿಟ್ಟಲ್, ಶ್ರೀಧರ್ ಪ್ರಸಾದ್ ಮತ್ತು ಮಹೇಶ್ ದಯಾಳ್ ಎಂದು ಗುರುತಿಸಲಾಗಿದೆ. 2015 ಆಗಸ್ಟ್ ತಿಂಗಳಿನಲ್ಲಿ ಪೋರ್ಟಲ್ ಆರಂಭಿಸಿದ್ದ ವಂಚಕರು ತಮ್ಮ ಸಂಸ್ಥೆ ಮೂಲಕ ಟ್ರೇಡ್ ಡಾಟ್ ಬಿಜ್ ಪೋರ್ಟಲ್ ಸ್ಥಾಪಿಸಿಕೊಂಡಿದ್ದರು. ಅದರ ಮೂಲಕ ಪ್ರತೀ ಕ್ಲಿಕ್ ಗೆ 5 ರು. ನೀಡುವುದಾಗಿ ಹೇಳಿ ಗ್ರಾಹಕರನ್ನು ಸೆಳೆಯುತ್ತಿದ್ದರು.

ತಮ್ಮ ಅರ್ನ್ ರುಪೀಸ್ 5 ಪರ್ ಕ್ಲಿಕ್ ಯೋಜನೆಯಲ್ಲಿ ಸದಸ್ಯರಾಗಲು ಕನಿಷ್ಠ 5 750 ರು.ನಿಂದ 57.500 ರು. ನೀಡಬೇಕು ಎಂದು ವಂಚಕರು ಗ್ರಾಹಕರನ್ನು ಸೆಳೆಯುತ್ತಿದ್ದರು. ವಂಚಕ ಕುರಿತು ಸುಳಿವು ಪಡೆದಿದ್ದ ವಿಶೇಷ ಕಾರ್ಯಪಡೆ ಪೊಲೀಸರು ಸಂಸ್ಥೆಯ ಕಚೇರಿ ಮೇಲೆ ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ. ಅಂತೆಯೇ ಸುಮಾರು 3700 ಕೋಟಿ ರು. ವಂಚನೆ ಕುರಿತು ದಾಖಲೆ ಸಂಗ್ರಹಿಸಿದ್ದು, ಈ ಪೈಕಿ 500 ಕೋಟಿ ರು.ಮೌಲ್ಯದ ವಿವರಗಳನ್ನು ಕಲೆ ಹಾಕಿದ್ದಾರೆ. ಅಂತೆಯೇ ವಂಚಕ ಸಂಸ್ಥೆಗೆ ಸೇರಿದೆ ಎಲ್ಲ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ತಪ್ಪಿಸಿಕೊಳ್ಳಲು ವೆಬ್ ತಾಣದ ವಿಳಾಸ ಬದಲಿಸುತ್ತಿದ್ದ ವಂಚಕರು!
ಇದೇ ವೇಳೆ ಸೈಬರ್ ಪೊಲೀಸರಿಂದ ತಪ್ಪಿಸಿಕೊಳ್ಳಲು ತಮ್ಮ ಆನ್ ಲೈನ್ ಟ್ರೇಡಿಂಗ್ ವಿಳಾಸವನ್ನು ವಂಚಕರು ಆಗಾಗ್ಗೆ ಬದಲಿಸುತ್ತಿದ್ದರಂತೆ. ಸೋಶಿಯಲ್ ಟ್ರೇಡ್ ಡಾಟ್ ಬಿಜ್ ಎಂದು ಆರಂಭವಾದ ಪೋರ್ಟಲ್ ಬಳಿಕ ಫ್ರೀಹಬ್ ಡಾಟ್ ಕಾಮ್, ಇಂಟ್ ಮಾರ್ಟ್ ಡಾಟ್ ಕಾಮ್, ಫೆಂಝಪ್ ಡಾಟ್ ಕಾಮ್ ಮತ್ತು 3ಡಬಲ್ಯೂ ಡಾಟ್ ಕಾಮ್ ಎಂದು ವಿವಿಧ ಹೆಸರುಗಳಿಗೆ ಬದಲಾಗುತ್ತಿತ್ತು. ಹೀಗಾಗಿ ವಂಚಕರ ಬಲೆಗೆ ಸಿಲುಕಿದ ಗ್ರಾಹಕರು ಹಣ ವಸೂಲಿ ಮಾಡಲಾಗದೇ ಪೇಚಾಟಕ್ಕೆ ಸಿಲುಕುತ್ತಿದ್ದರು. ಇದೀಗ ವಂಚಕರ ಹೆಡೆ ಮುರಿ ಕಟ್ಟಿರುವ ಉತ್ತರ ಪ್ರದೇಶ ಪೊಲೀಸರು ಜಾಲದ ಉಳಿದ ವಂಚಕರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಅಂತೆಯೇ ಉಳಿದ ಭಾರಿ ಪ್ರಮಾಣದ ಹಣದ ಕುರಿತ ದಾಖಲೆಗಾಗಿ ಶೋಧ ನಡೆಸಿದ್ದಾರೆ.

Comments are closed.