ಪ್ರಮುಖ ವರದಿಗಳು

ಮಹಿಳೆಯ ಮೂಗಿನಾಳದಲ್ಲಿ ಸೇರಿದ್ದ ಜೀವಂತ ಜಿರಳೆ ಹೊರ ತೆಗೆದ ವೈದ್ಯರು!

Pinterest LinkedIn Tumblr

ಚೆನ್ನೈ: ಅಪರೂಪದಲ್ಲೇ ಅಪರೂಪ ಎನ್ನುವ ಪ್ರಕರಣವೊಂದರಲ್ಲಿ ಚೆನ್ನೈನ ಸ್ಟ್ಯಾನ್ಲಿ ಮೆಡಿಕಲ್ ಕಾಲೇಜಿನ ವೈದ್ಯರು ಮಹಿಳೆಯ ಮೂಗಿನಾಳದಲ್ಲಿ ಸೇರಿದ್ದ ಜೀವಂತ ಜಿರಳೆಯನ್ನು ಹೊರ ತೆಗೆದಿದ್ದಾರೆ.

ಮೂಲಗಳ ಪ್ರಕಾರ 42 ವರ್ಷದ ಸೆಲ್ವಿ ಎಂಬುವವರ ಮೂಗಿನಾಳದಲ್ಲಿ ಜೀವಂತ ಜಿರಳೆ ಸೇರಿಕೊಂಡಿತ್ತು. ವೃತ್ತಿಪರವಾಗಿ ಮನೆಕೆಲಸ ಮಾಡಿಕೊಂಡಿದ್ದ ಸೆಲ್ವಿ ಮಂಗಳವಾರ ರಾತ್ರಿ ಮನೆ ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದು ಊಟ ಮಾಡಿ ಮಲಗಿದ್ದಾರೆ. ಮಧ್ಯರಾತ್ರಿ ವೇಳೆ ಸೆಲ್ವಿ ನಿದ್ರೆಯಲ್ಲಿದ್ದ ಸಂದರ್ಭದಲ್ಲಿ ಜಿರಳೆಯೊಂದು ಆಕೆಯ ಮೂಗಿನೊಳಗೆ ಸೇರಿಕೊಂಡಿದೆ. ಜಿರಳೆ ಮೂಗಿನೊಳಗೆ ಸೇರಿಕೊಳ್ಳುತ್ತಿದ್ದಂತೆಯೇ ಸೆಲ್ವಿ ಅವರಿಗೆ ಎಚ್ಚರವಾಗಿದ್ದು, ಮೂಗಿನೊಳಗೆ ಏನೋ ಸೇರಿಕೊಂಡಿರುವ ಅನುಭವಾವಾಗಿದೆ.

ಸಾಕಷ್ಟು ಭಾರಿ ಅದನ್ನು ತೆಗೆಯುವ ಪ್ರಯತ್ನ ಮಾಡಿದ್ದಾರೆಯಾದರೂ ಅದು ಸಫಲವಾಗಿಲ್ಲ. ಹೀಗಾಗಿ ಬೇರೆ ಮಾರ್ಗವಿಲ್ಲದೇ ಅರ್ಧರಾತ್ರಿಯಲ್ಲೇ ಸಮೀಪದ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಮೊದಲ ಆಸ್ಪತ್ರೆಯಲ್ಲಿ ಸೆಲ್ವಿ ಅವರನ್ನು ಪರೀಕ್ಷಿಸಿದ ವೈದ್ಯರು ಬೇರೊಂದು ಚರ್ಮ ಸಮಸ್ಯೆಯ ಕ್ಲಿನಿಕ್ ಗೆ ಕಳುಹಿಸಿಕೊಟ್ಟಿದ್ದಾರೆ. ಆ ಕ್ಲಿನಿಕ್ ನಲ್ಲಿ ಆಕೆಯನ್ನು ಪರೀಕ್ಷೆಸಿದ ವೈದ್ಯರು ಮೂಗಿನಾಳದಲ್ಲಿ ಚರ್ಮ ಬೆಳೆದಿರುವ ಸಾಧ್ಯತೆ ಇದೆ ಎಂದು ಹೇಳಿ ಕಳುಹಿಸಿಕೊಟ್ಟಿದ್ದಾರೆ. ಅಷ್ಟು ಹೊತ್ತಿಗಾಗಲೇ ಜಿರಳೆ ಆಕೆಯ ಮೂಗಿನಾಳಕ್ಕೆ ಇಳಿದು, ತಲೆ ಬುರುಡೆ ಬುಡದಲ್ಲಿ ಅಂದರೆ ಎರಡು ಕಣ್ಣುಗಳ ಅಂತರದಲ್ಲಿ ಸಿಲುಕಿಕೊಂಡಿದೆ.

ಅತೀವ ಕಣ್ಣು ಉರಿ ಹಾಗೂ ನೋವಿನಿಂದ ಬಳಲುತ್ತಿದ್ದ ಸೆಲ್ವಿ ತಮ್ಮ ಆಪ್ತರ ಸಲಹೆ ಮೇರೆಗೆ ಚೆನ್ನೈನ ಸ್ಟ್ಯಾನ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಸೆಲ್ವಿ ಅವರನ್ನು ಪರೀಕ್ಷಿಸಿದ ವೈದ್ಯರು ಆಕೆಯ ಮೂಗಿನ ಎಂಡೋಸ್ಕೋಪಿ ಪರೀಕ್ಷೆ ನಡೆಸಿದ್ದಾರೆ. ಆಗ ಆಕೆಯ ಮೂಗಿನಾಳದಲ್ಲಿ ಜಿರಳೆ ಗಾತ್ರದ ವಸ್ತುವೊಂದು ಇರುವುದು ಪತ್ತೆಯಾಗಿದೆ. ಕೂಡಲೇ ಚಿಕಿತ್ಸೆ ನೀಡಿದ ವೈದ್ಯರು ಸೋಂಕು ನಿರೋಧಕ ತಂತ್ರದ ಮೂಲಕ ಸುಮಾರು 45 ನಿಮಿಷಗಳ ಕಾಲ ಸೂಕ್ಷ್ಮ ಪ್ರಕ್ರಿಯೆ ನಡೆಸಿ ಕೊನೆಗೂ ಜಿರಳೆಯನ್ನು ಹೊರ ತೆಗೆದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ಎನ್ ಆ್ಯಂಡ್ ಟಿ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎನ್. ಶಂಕರ್ ಅವರು, ನನ್ನ 30 ವರ್ಷಗಳ ವೃತ್ತಿ ಜೀವನದಲ್ಲಿ ಇಂತಹ ಪ್ರಕರಣವನ್ನು ನೋಡಿರಲಿಲ್ಲ. ಮೂಗಿನ ಎಂಡೋಸ್ಕೊಪ್ ಮೂಲಕ ಪರೀಕ್ಷೆ ಮಾಡಿದಾಗ ಜೀವಂತ ಜಿರಳೆಯೊಂದು ಮಹಿಳೆಯ ಕಣ್ಣುಗಳ ಮಧ್ಯೆ ಹಾಗೂ ಮೆದುಳಿನ ಸನಿಹ ಸಿಲುಕಿಹಾಕಿಕೊಂಡಿರುವುದು ಪತ್ತೆಯಾಗಿದೆ. ಮೂಗಿನಲ್ಲಿ ಏನಾದರೂ ಸಿಲುಕಿಕೊಂಡರೆ ಪತ್ತೆಯಾಗುವುದು ತುಂಬಾ ಕಡಿಮೆ. ಮಹಿಳೆಯೊಬ್ಬರ ಮೂಗಿನಲ್ಲಿ ಜೀವಂತ ಜಿರಳೆ ಇರುವುದು ತುಂಬಾ ಅಚ್ಚರಿಯ ವಿಷಯವಾಗಿತ್ತು. ಒಂದು ವೇಳೆ ಜಿರಳೆಯನ್ನು ಹೊರ ತೆಗೆಯದೇ ಇದ್ದರೆ ಅದು ಅಲ್ಲಿ ಸತ್ತುಹೋಗಿ ಸೆಲ್ವಿಯ ಮೆದುಳಿಗೆ ಇನ್‌ಫೆಕ್ಷನ್ ಆಗುವ ಸಾಧ್ಯತೆಯಿತ್ತು” ಎಂದು ತಿಳಿಸಿದ್ದಾರೆ.

Comments are closed.