ರಾಷ್ಟ್ರೀಯ

ಒಡಿಸ್ಸಾ: ನೆಲಬಾಂಬ್ ಸ್ಫೋಟಿಸಿ 7 ಮಂದಿ ಪೊಲೀಸರ ಹತ್ಯೆ

Pinterest LinkedIn Tumblr


ಭುವನೇಶ್ವರ್/ ಕೋರಾಪುಟ್, ಫೆ. ೨- ಒಡಿಸ್ಸಾದಲ್ಲಿ ಮಾವೋವಾದಿ ನಕ್ಸಲರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ರಾಜ್ಯದ ಕೋರಾಪುಟ್ ಸಮೀಪದ ಸುಂಕಿ- ಸಾಲೂರ್ ಗುಡ್ಡಗಾಡು ಪ್ರದೇಶದಲ್ಲಿ ಮಾವೋವಾದಿ ಉಗ್ರರು ಪ್ರಬಲ ನೆಲಬಾಂಬ್ ಸ್ಫೋಟಿಸಿ 7 ಮಂದಿ ಪೊಲೀಸರನ್ನು ಬಲಿತೆಗೆದುಕೊಂಡಿರುವ ಘಟನೆ ನಿನ್ನೆ ನಡೆದಿದೆ.
ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಅವರನ್ನು ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಆಸ್ಪತ್ರೆಗೆ ಸಾಗಿಸಲಾಗಿದೆ. ಮತ್ತೊಬ್ಬ ಪೊಲೀಸ್ ಕಾಣೆಯಾಗಿದ್ದು ಅವರಿಗಾಗಿ ಶೋಧ ಮುಂದುವರೆದಿದೆ.
ಕಳೆದ ವರ್ಷ ಒಡಿಸ್ಸಾ ಮತ್ತು ಆಂಧ್ರ ಪ್ರದೇಶ ಪೊಲೀಸರು ನಕ್ಸಲರ ವಿರುದ್ಧ ಕಾರ್ಯಾಚರಣೆ ಕೈಗೆತ್ತಿಕೊಂಡಿರುವುದರ ವಿರುದ್ಧ ಪ್ರತಿಕಾರ ಭಾವನೆಯಿಂದ ನೆಲಬಾಂಬ್ ಸ್ಫೋಟಿಸಲಾಗಿದೆ ಎಂದು ಹೇಳಲಾಗುತ್ತಿದೆ.
ನತದೃಷ್ಟ ವಾಹನದಲ್ಲಿ ಚಾಲಕ ಸೇರಿದಂತೆ 12 ಮಂದಿ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಅಂಗೂಲ್‌ನಲ್ಲಿರುವ ಪೊಲೀಸ್ ತರಬೇತಿ ಕಾಲೇಜಿನಲ್ಲಿ ತರಬೇತಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪೊಲೀಸ್ ಸಿಬ್ಬಂದಿ ತೆರಳುತ್ತಿದ್ದಾಗ ನಿನ್ನೆ ಸಂಜೆ 4.30 ರಿಂದ 5.00 ಗಂಟೆಯ ಒಳಗೆ ಮಾವೋವಾದಿಗಳು ನೆಲಬಾಂಬ್ ಸ್ಫೋಟಿಸಿದ್ದಾರೆ.
ನೆಲಬಾಂಬ್ ಸ್ಫೋಟಗೊಂಡ ನಂತರ ವಾಹನ ಪಲ್ಟಿ ಹೊ‌ಡೆದು ಗುಡ್ಡಗಾಡು ರಸ್ತೆಗಳಲ್ಲಿ ಉರುಳಿ ಬಿದ್ದಿದೆ. ಇದರಲ್ಲಿದ್ದ ಭದ್ರತಾ ಸಿಬ್ಬಂದಿ ಒಡಿಸ್ಸಾ ರಾಜ್ಯದ ಸಶಸ್ತ್ರ ಪೊಲೀಸ್ ಪಡೆಯ 3ನೇ ತುಕಡಿಗೆ ಸೇರಿದವರೆಂದು ಪೊಲೀಸರು ತಿಳಿಸಿದ್ದಾರೆ.
ದುರಂತ ಸ್ಥಳದಲ್ಲಿ ಗಾಯಗೊಂಡವರ ಆಕ್ರಂದನ ಮುಗಿಲು ಮುಟ್ಟಿತ್ತು. ನೆಲಬಾಂಬ್ ಸ್ಫೋಟದ ತೀವ್ರತೆಯನ್ನು ಸಿಬ್ಬಂದಿಯ ಆಕ್ರಂದನದಿಂದ ತಿಳಿಯಬಹುದಾಗಿತ್ತು. ಸತ್ತವರ ಪೈಕಿ 6 ಮಂದಿ ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದರೆ ಮತ್ತೊಬ್ಬ ಸಿಬ್ಬಂದಿ ಸಾಲೂರ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ನೆಲಬಾಂಬ್ ಸ್ಫೋಟ ಆಂಧ್ರ ಪ್ರದೇಶ ಮತ್ತು ಒಡಿಸ್ಸಾ ಗಡಿಯಲ್ಲಿನ ಸುಂಕಿ ಪ್ರದೇಶದಲ್ಲಿ ಸಂಭವಿಸಿದೆ. ಗಾಯಗೊಂಡ ಪೊಲೀಸರನ್ನು ವಿಶಾಖಪಟ್ಟಣಂ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಕೆ.ಬಿ. ಸಿಂಗ್ ಹೇಳಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆಂದು ಅವರು ಹೇಳಿದರು.
ಪೊಲೀಸರ ಧಾರುಣ ಸಾವಿಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತೀವ್ರ ಶೋಕ ವ್ಯಕ್ತಪಡಿಸಿದ್ದು, ಮಾವೋವಾದಿ ಉಗ್ರರ ಈ ಕೃತ್ಯ ಅತ್ಯಂತ ಹೀನಾಯ ಎಂದು ಪ್ರತಿಕ್ರಿಯಿಸಿದ್ದಾರೆ.
ಆಂಧ್ರ ಪ್ರದೇಶ ಮತ್ತು ಒಡಿಸ್ಸಾ ಗ‌ಡಿಯಲ್ಲಿ ಸಕ್ರೀಯವಾಗಿರುವ ಸಿಪಿಐ ಮಾವೋವಾದಿಗಳ ಕೃತ್ಯ ಇದಾಗಿದೆ ಎಂದು ರಾಜ್ಯ ಗುಪ್ತದಳದ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.