ರಾಷ್ಟ್ರೀಯ

ಬ್ಯಾಂಕ್‍ ಸಾಲಕ್ಕೆ ಮಲ್ಯಗೆ ಮನಮೋಹನ್ ಸಿಂಗ್ ಸಹಾಯ!

Pinterest LinkedIn Tumblr


ನವದೆಹಲಿ: ಕಿಂಗ್‍ ಫಿಶರ್ ವಿಮಾನಯಾನ ಸಂಸ್ಥೆಯ ಹೆಸರಲ್ಲಿ ಸಾಲ ಪಡೆಯುವುದಕ್ಕಾಗಿ ಉದ್ಯಮಿ ವಿಜಯ್ ಮಲ್ಯ ಅವರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಹಾಯ ಮಾಡಿದ್ದರು ಎಂದು ಬಿಜೆಪಿ ಆರೋಪಿಸಿದೆ.

ಮಲ್ಯ ಅವರು ಮನಮೋಹನ್ ಸಿಂಗ್ ಅವರಿಗೆ ಬರೆದ ಇಮೇಲ್‍ ಪ್ರತಿಯನ್ನು ಉಲ್ಲೇಖಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು, ಮನಮೋಹನ್ ಸಿಂಗ್ ಅವರು ಒತ್ತಾಯಿಸಿದ ಕಾರಣ ಮಲ್ಯ ಅವರಿಗೆ ಬ್ಯಾಂಕ್ ಸಾಲ ನೀಡಲು ಸಮ್ಮತಿಸಿತ್ತು.

ಇಷ್ಟೇ ಅಲ್ಲ, ಮನಮೋಹನ್ ಸಿಂಗ್ ಅವರು ಒತ್ತಾಯ ಮಾಡಿದ್ದರಿಂದ, ಮಲ್ಯ ಅವರ ಖಾತೆ ಮೇಲೆ ಕ್ರಮಗೊಳ್ಳಲು ಆದಾಯ ತೆರಿಗೆ ಇಲಾಖೆಯೂ ಹಿಂದೇಟು ಹಾಕಿತ್ತು ಎಂದು ಪಾತ್ರಾ ಹೇಳಿದ್ದಾರೆ.

ಮಲ್ಯ ಅವರ ಕಂಪನಿಗೆ ಕಳಪೆ ರೇಟಿಂಗ್ ಇದ್ದರೂ 9,000 ಕೋಟಿ ಸಾಲ ನೀಡಿದ್ದು ಯಾಕೆ? ಎಂಬ ಪ್ರಶ್ನೆ ಎದ್ದಿತ್ತು. ಕೆಲವು ವ್ಯಕ್ತಿಗಳ ಪ್ರಭಾವದಿಂದಾಗಿಯೇ ಮಲ್ಯ ಅವರ ಖಾತೆಯ ಮೇಲೆ ಯಾವುದೇ ಕ್ರಮಗಳನ್ನೂ ತೆಗೆದುಕೊಂಡಿಲ್ಲ ಎಂದು ಪಾತ್ರಾ ಆರೋಪಿಸಿದ್ದಾರೆ.

ನಮ್ಮಲ್ಲಿ ಕೆಲವೊಂದು ಇಮೇಲ್, ಪತ್ರಗಳು ಇವೆ. ಈ ಆಧಾರದ ಮೇಲೆಯೇ ನಾವು ಆರೋಪಗಳನ್ನು ಮಾಡುತ್ತಿದ್ದೇವೆ ಎಂದು ಬಿಜೆಪಿ ಹೇಳಿದೆ.

ಪತ್ರದಲ್ಲೇನಿದೆ?
‘ನೆಟ್‌ವರ್ಕ್‌ 18’ ಮಾಧ್ಯಮ ಸಂಸ್ಥೆಯ ವರದಿ ಪ್ರಕಾರ, ಮಲ್ಯ ಅವರು ಮನಮೋಹನ್ ಸಿಂಗ್ ಅವರಿಗೆ ಅಕ್ಟೋಬರ್ 4, 2011ರಂದು ಬರೆದ ಇಮೇಲ್ ಸಾರಾಂಶ ಹೀಗಿದೆ:
ಕಿಂಗ್ ಫಿಶರ್ ವಿಮಾನಯಾನ ಸಂಸ್ಥೆ ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ವಿವರಿಸುವುದಕ್ಕಾಗಿ ಸೆಪ್ಟೆಂಬರ್ 8ರಂದು ನನ್ನನ್ನು ಭೇಟಿ ಮಾಡಿದ್ದಕ್ಕಾಗಿ ಧನ್ಯವಾದಗಳು. ನಮ್ಮ ಸಂಸ್ಥೆಗೆ ಹೆಚ್ಚಿನ ಆರ್ಥಿಕ ಸಹಾಯ ನೀಡುವಂತೆ ನಾವು ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೊರೆ ಹೋಗಿದ್ದೇವೆ. ಟಿಕೆಎ ನಾಯಕ್ ಅವರನ್ನು ಭೇಟಿ ಮಾಡುವಂತೆ ನೀವು ನಮಗೆ ಹೇಳಿದ್ದಿರಿ. ನಾವು ಹಾಗೆಯೇ ಮಾಡಿದ್ದೇವೆ, ನಾಯರ್ ಅವರು ಕೂಡಲೇ ಸಚಿವಾಲಯದಲ್ಲಿ ಸಂಬಂಧಪಟ್ಟ ವ್ಯಕ್ತಿಗಳ ಜತೆ ಮಾತನಾಡಿ ಎಲ್ಲವನ್ನೂ ಸರಿ ಮಾಡಿದ್ದಾರೆ.

Comments are closed.