ರಾಷ್ಟ್ರೀಯ

ತಮಿಳುನಾಡು ಪೊಲೀಸರಿಂದಲೇ ಆಟೋಗೆ ಬೆಂಕಿ; ವಿಡಿಯೋ ಅಪ್ಲೋಡ್ ಮಾಡಿದ ಕಮಲ್ ಹಾಸನ್ ಹೇಳಿದ್ದೇನು…

Pinterest LinkedIn Tumblr

ಚೆನ್ನೈ: ಜಲ್ಲಿಕಟ್ಟು ಸಂಬಂಧ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿರುವಂತೆಯೇ ಪೊಲೀಸ್ ಅಧಿಕಾರಿಯೊಬ್ಬ ಆಟೋಗೆ ಬೆಂಕಿ ಇಡುತ್ತಿರುವ ದೃಶ್ಯ ಇದೀಗ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.

ಖ್ಯಾತ ತಮಿಳು ನಟ ಕಮಲ್ ಹಾಸನ್ ಸೇರಿದಂತೆ ವಿವಿಧ ಮಂದಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಪೊಲೀಸ್ ಕೃತ್ಯಕ್ಕೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇ ಅಲ್ಲದೇ ಮಾಧ್ಯಮಗಳಲ್ಲೂ ಈ ವಿಡಿಯೋ ವ್ಯಾಪಕವಾಗಿ ಸುದ್ದಿಗೆ ಗ್ರಾಸವಾಗುತ್ತಿದ್ದು, ಪೊಲೀಸರ ಕೃತ್ಯಕ್ಕೆ ಎಲ್ಲಡೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಕೆಲವು ಪ್ರತಿಭಟನಾಕಾರರು ತಮ್ಮ ವಿರುದ್ಧ ಲಾಠಿ ಪ್ರಹಾರವನ್ನು ಷಡ್ಯಂತ್ರ ಎಂದು ಹೇಳಿದ್ದು, ಪೊಲೀಸರೇ ಹಿಂಸೆ ಸೃಷ್ಟಿಸುವ ಮೂಲಕ ಶಾಂತಿಯುತವಾಗಿ ಸಾಗುತ್ತಿದ್ದ ಪ್ರತಿಭಟನೆಯನ್ನು ಹಿಂಸಾರೂಪಕ್ಕೆ ತಿರುಗಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಅಧಿಕೃತ ಬಗ್ಗೆ ಇನ್ನೂ ಮಾಹಿತಿ ಇಲ್ಲ!
ಆದರೆ ಪ್ರಸ್ತುತ ವೈರಲ್ ಆಗಿರುವ ವಿಡಿಯೋ ಕುರಿತ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ವಿಡಿಯೋ ಪ್ರತಿಭಟನೆಯದ್ದೇ ಅಥವಾ ಹಳೆಯ ವಿಡಿಯೋ ಆಗಿದೆಯೇ ಎಂಬ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ಆದರೂ ಈ ವಿಡಿಯೋ ಮಾತ್ರ ಇದೀಗ ತಮಿಳುನಾಡು ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ವಿಡಿಯೋ ಕುರಿತಂತೆ ತನಿಖೆ ನಡೆಸುವುದಾಗೆ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಅಂತೆಯೇ ಮತ್ತೋರ್ವ ಪೊಲೀಸ್ ಅಧಿಕಾರಿ ಟಿಕೆ ರಾಜೇಂದ್ರ ಎಂಬುವವರು ವಿಡಿಯೋ ನಕಲಿ ಎಂಬ ಅನುಮಾನ ಮೂಡುತ್ತಿದ್ದು, ಗ್ರಾಫಿಕ್ಸ್ ಆಗಿರಬಹುದು ಎಂಬ ಶಂಕೆ ಇದೆ. ಆದರೂ ವಿಡಿಯೋ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮರೀನಾ ಬೀಚ್ ನಲ್ಲಿ ಮುಂದುವರೆದ ಪ್ರತಿಭಟನೆ
ಇನ್ನು ಮರೀನಾ ಬೀಚ್ ನಲ್ಲಿ ಬೀಡು ಬಿಟ್ಟಿರುವ ಸುಮಾರು 2 ಸಾವಿರ ಪ್ರತಿಭಟನಾಕಾರರು ಜಲ್ಲಿಕಟ್ಟು ಸಂಬಂಧ ಶಾಶ್ವತ ಕ್ರಮಕ್ಕೆ ಸರ್ಕಾರ ಮುಂದಾಗುವವರೆಗೂ ಮರೀನಾ ಬೀಚ್ ಬಿಟ್ಟು ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Comments are closed.