ರಾಷ್ಟ್ರೀಯ

“ಸುಪ್ರೀಂ” ಆದೇಶದ ಹೊರತಾಗಿಯೂ ತ.ನಾಡಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಜಲ್ಲಿಕಟ್ಟು ತರಬೇತಿ!

Pinterest LinkedIn Tumblr

ಕಡಲೂರ್: ಪೊಂಗಲ್ ಹಬ್ಬಕ್ಕೂ ಮುಂಚಿತವಾಗಿ ಜಲ್ಲಿಕಟ್ಟು ಆಚರಣೆ ಸಂಬಂಧ ಆದೇಶ ನೀಡಲು ಸಾಧ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ ನ ಆದೇಶದ ಹೊರತಾಗಿಯೂ ತಮಿಳುನಾಡಿನಲ್ಲಿ ಜಲ್ಲಿಕಟ್ಟು ತರಬೇತಿ ಎಗ್ಗಿಲ್ಲದೇ ಸಾಗಿದೆ.

ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ಗುಪ್ತವಾದಿ ಗೂಳಿಗಳಿಗೆ ಜಲ್ಲಿಕಟ್ಟು ತರಬೇತಿ ನೀಡಲಾಗುತ್ತಿದ್ದು, ಪೊಂಗಲ್ ಹಬ್ಬದ ಸಂದರ್ಭದಲ್ಲಿ ಗೂಳಿಗಳನ್ನು ಜಲ್ಲಿಕಟ್ಟಿನಲ್ಲಿ ಓಡಿಸಲು ಜನರು ನಿರ್ಧರಿಸಿದ್ದಾರೆ. ತಮಿಳುನಾಡಿನ ಕಡಲೂರು ಮತ್ತು ಮದುರೈನಲ್ಲಿ ಗುಪ್ತವಾಗಿ ಗೂಳಿಗಳಿಗೆ ಜಲ್ಲಿಕಟ್ಟು ತರಬೇತಿ ನೀಡುತ್ತಿದ್ದ ಆರೋಪದ ಮೇರೆಗೆ 28 ಮಂದಿಯನ್ನು ಪೊಲೀಸರು ಬಂಧಿಸಿದ್ದು, 4 ಗೂಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಡಲೂರಿನ ತಿರುಮನಿಕುಡಿ ಗ್ರಾಮದ ಬಳಿ ನಾಮ್ ತಮಿಳರ್ ಪಾರ್ಟಿ ಕಾರ್ಯಕರ್ತರು ರಹಸ್ಯವಾಗಿ ಜಲ್ಲಿಕಟ್ಟು ತರಬೇತಿ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಅಲ್ಲಿದ್ದ ನಾಲ್ಕು ಗೂಳಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇಂತಹುದೇ ಮತ್ತೊಂದು ಘಟನೆ ಮದುರೈ ನಲ್ಲಿ ನಡೆದಿದ್ದು, ಮಧುರೈ ಹೊರವಲಯದ ಗ್ರಾಮದ ಗದ್ದೆಗಳಲ್ಲಿ ಗೂಳಿಗಳಿಗೆ ತರಬೇತಿ ನೀಡಲಾಗುತ್ತಿತ್ತು. ಕರಿಸಲ್ ಕುಲಂ ಗ್ರಾಮದ ಮೈದಾನದಲ್ಲಿ ಕೆಲ ತಮಿಳುಪರ ಸಂಘಟನೆಗಳ ಕಾರ್ಯಕರ್ತರು ಜಲ್ಲಿಕಟ್ಟು ತರಬೇತಿಯಲ್ಲಿ ತೊಡಗಿದ್ದು, ಈ ವಿಚಾರ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ವಾಗ್ವಾದ ಕೂಡ ನಡೆದಿದೆ ಎಂದು ತಿಳಿದುಬಂದಿದೆ. ಬಳಿಕ ಪೊಲೀಸರು ಬಂಧನದ ಎಚ್ಚರಿಕೆ ನೀಡಿದ ಬಳಿಕ ಗ್ರಾಮಸ್ಥರು ಅಲ್ಲಿಂದ ಕಾಲ್ಕಿತ್ತರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ವರದಿ ನೋಡಿದ ಪೊಲೀಸರು ಸ್ಥಳಕ್ಕಾಗಮಿಸಿ ಆಯೋಜಕರನ್ನು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ಕಡಲೂರಿನಲ್ಲಿ ನಡೆಯುತ್ತಿದ್ದ ಜಲ್ಲಿಕಟ್ಟು ಆಚರಣೆಗೆ ಸುಮಾರು 50 ಗೂಳಿಗಳನ್ನು ಬಳಕೆ ಮಾಡಲು ನಿರ್ಧರಿಸಲಾಗಿತ್ತಂತೆ. ಈ ಬಗ್ಗೆ ಬಂಧಿತರಾಗಿರುವ ನಾಮ್ ತಮಿಳರ್ ಸಂಘಟನೆಯ ಕಾರ್ಯಕರ್ತರು ಮಾಹಿತಿ ನೀಡಿದ್ದು, ಸುಮಾರು 50ಕ್ಕೂ ಹೆಚ್ಚು ನುರಿತ ಗೂಳಿ ಮಾಲೀಕರು ಜಲ್ಲಿಕಟ್ಟು ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.

ಒಟ್ಟಾರೆ ಪ್ರಾಣಿ ಸಂರಕ್ಷಣಾ ಸಂಸ್ಥೆ ಪೇಟಾ ಹಾಗೂ ಸುಪ್ರೀಂ ಕೋರ್ಟ್ ನ ಆದೇಶದ ಹೊರತಾಗಿಯೂ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆ ಎಗ್ಗಿಲ್ಲದೇ ಸಾಗುತ್ತಿದೆ.

Comments are closed.