ರಾಷ್ಟ್ರೀಯ

ರಾಹುಲ್ ಮಾತನಾಡಲು ಆರಂಭಿಸಿರುದರಿಂದ ಇನ್ಮುಂದೆ ಭೂಕಂಪವಾಗುವ ಸಾಧ್ಯತೆ ಇಲ್ಲ: ಪ್ರಧಾನಿ ಮೋದಿ ವ್ಯಂಗ್ಯ

Pinterest LinkedIn Tumblr

modi-and-rahul-gandhi1

ವಾರಣಾಸಿ: ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಹರಾ ಗ್ರೂಪ್ ನಿಂದ ಕೋಟಿಗಟ್ಟಲೆ ಲಂಚ ಪಡೆದಿದ್ದಾರೆ. ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಅದನ್ನೆಲ್ಲ ಹೇಳಿದರೆ ಭೂಕಂಪವಾಗಬಹುದು ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಕುಟುಕುವ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನ ಯುವ ನಾಯಕ ಈಗ ಮಾತನಾಡಲು ಕಲಿಯುತ್ತಿದ್ದಾರೆ. ಹೇಗೆ ಮಾತನಾಡಬೇಕು ಎಂದು ಅವರು ಕಲಿಯಲು ಆರಂಭಿಸಿದ್ದಕ್ಕೆ ನನಗೆ ಸಂತೋಷವಿದೆ. 2009ರಲ್ಲಿ ಈ ಪೊಟ್ಟಣದೊಳಗೆ ಏನಿದೆ ಎಂದು ಹೇಳಲು ಕೂಡ ನಿಮಗೆ ಸಾಧ್ಯವಾಗುತ್ತಿರಲಿಲ್ಲ, ಈಗ ನಮಗೆ ಅದರೊಳಗೆ ಏನಿದೆ ಅಂತ ಗೊತ್ತಾಗಿದೆ ಎಂದು ವ್ಯಂಗ್ಯಭರಿತವಾಗಿ ಹೇಳಿದರು.

ರಾಹುಲ್ ಗಾಂಧಿಯವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದ ಮೋದಿ, ಅವರು ಮಾತನಾಡದಿದ್ದರೆ ಭೂಕಂಪವಾಗುತ್ತಿತ್ತು. ಅದನ್ನು ಜನರು ಸಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಅವರು ಮಾತನಾಡಲು ಆರಂಭಿಸಿರುವುದು ಉತ್ತಮ ಬೆಳವಣಿಗೆಯೇ. ಹಾಗಾಗಿ ಈಗ ಭೂಕಂಪವಾಗುವ ಸಾಧ್ಯತೆಯಿಲ್ಲ ಎಂದರು.

ನೋಟುಗಳ ನಿಷೇಧದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ನೋಟು ನಿಷೇಧ ದೊಡ್ಡ ಸ್ವಚ್ಛತಾ ಅಭಿಯಾನವಿದ್ದ ಹಾಗೆ. ಜನರು ಸರ್ಕಾರದ ಈ ಅಭಿಯಾನಕ್ಕೆ ಬೆಂಬಲ ನೀಡುತ್ತಿದ್ದಾರೆ. ನನಗೆ ಈ ದೇಶದ 125 ಕೋಟಿ ಭಾರತೀಯರ ಮೇಲೆ ನಂಬಿಕೆಯಿದೆ. ಭಾರತೀಯರು ನಿಸ್ವಾರ್ಥಿಗಳು. ಜನರ ಆಶೀರ್ವಾದ ಸರ್ವಶಕ್ತನ ಆಶೀರ್ವಾದ ಸಿಕ್ಕಿದ ಹಾಗೆ ಎಂದು ಭಾವನಾತ್ಮಕವಾಗಿ ನುಡಿದರು.ವಿರೋಧ ಪಕ್ಷಗಳು ಭ್ರಷ್ಟಾಚಾರಿಗಳ ಪರ ನಿಂತಿದೆ ಎಂದು ಆರೋಪಿಸಿದರು.

ಭಾರತದಲ್ಲಿ ಬಹುಪಾಲು ಮಂದಿಗೆ ಶಿಕ್ಷಣ ತಲುಪುತ್ತಿಲ್ಲ ಎನ್ನುತ್ತಾರೆ, ಅವರು ಯಾರ ಬಗ್ಗೆ ಹೇಳುತ್ತಿದ್ದಾರೆ, ಯಾವ ವರದಿಯ ಆಧಾರದ ಮೇಲೆ ಹೇಳುತ್ತಾರೆ ಎಂದು ನಾನು ತಿಳಿದುಕೊಳ್ಳಬೇಕು ಎಂದರು.

ಅವರು ಇಂದು ತಮ್ಮ ಸ್ವಕ್ಷೇತ್ರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುವುದಕ್ಕೆ ಮುನ್ನ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಇಂದಿನ ಯುವಕರು ಆನ್ ಲೈನ್ ಬ್ಯಾಂಕಿಂಗ್ ನತ್ತ ಮುಖ ಮಾಡಬೇಕೆಂದು ಒತ್ತಾಯಿಸುತ್ತೇನೆ. ನಿಮ್ಮ ಅತ್ಯಾಧುನಿಕ ಮೊಬೈಲ್ ಫೋನ್ ಗಳು ನಿಮ್ಮ ಬ್ಯಾಂಕ್ ಮತ್ತು ವಾಲ್ಲೆಟ್ ಗಳಾಗಬಹುದು ಎಂದು ಡಿಜಿಟಲೀಕರಣದತ್ತ ಜನರು ಸಾಗಬೇಕೆಂದು ಒತ್ತಾಯಿಸಿದರು.

Comments are closed.