ಹರಿದ್ವಾರ(ಡಿ.15): ಪತಂಜಲಿ ಉತ್ಪನ್ನಗಳ ಬಗ್ಗೆ ತಪ್ಪಾಗಿ ಜಾಹಿರಾತು ನೀಡಿದ ಯೋಗಗುರು ರಾಮದೇವ್ ಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ 11 ಲಕ್ಷ ರೂ. ದಂಡವನ್ನು ವಿಧಿಸಿದೆ.
ಉತ್ಪನ್ನಗಳನ್ನು ಬೇರೆ ಕಡೆ ತಯಾರಿಸಿ ತನ್ನ ಸ್ವಂತ ಉತ್ಪಾದನಾ ಘಟಕದಲ್ಲಿ ತಯಾರಿಸಿದ್ದೆಂದು ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಪತಂಜಲಿ ತಯಾರಿಸಿದ ಸಾಸಿವೆ ಎಣ್ಣೆ, ಉಪ್ಪು, ಪೈನಾಪಲ್ ಜಾಮ್, ಜೇನುತುಪ್ಪದ ಗುಣಮಟ್ಟವನ್ನು ರುದ್ರಾಪುರ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಗುಣಮಟ್ಟದ ಕೊರತೆ ಇತ್ತು. ಹಾಗಾಗಿ ಜಿಲ್ಲಾ ಆಹಾರ ಭದ್ರತಾ ಇಲಾಖೆ 2012 ರಲ್ಲಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು.
ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಲಲಿತ್ ನಾರಾಯಣ್ ಮಿಶ್ರಾ ಒಂದು ತಿಂಗಳೊಳಗೆ 5 ಲಕ್ಷ ರೂ. ದಂಡವನ್ನು ಪಾವತಿಸಬೇಕೆಂದು ಆದೇಶಿಸಿದ್ದಾರೆ.
ಉತ್ಪನ್ನವು ಸೆಕ್ಷನ್ 52-53 (ಆಹಾರ ಭದ್ರತಾ ಗುಣಮಟ್ಟ), ಸೆಕ್ಷನ್ 23.1 (5) ಆಹಾರ ಭದ್ರತೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ಕಾಯ್ದೆಯನ್ನು ಉಲ್ಲಂಘಿಸಿದೆ.