ರಾಷ್ಟ್ರೀಯ

ಜಯಲಲಿತಾರನ್ನು ಆಸ್ಪತ್ರೆ ಸಿಬ್ಬಂದಿ ಸ್ಮರಿಸಿಕೊಂಡದ್ದು ಹೀಗೇ!

Pinterest LinkedIn Tumblr

jayalalitaಚೆನ್ನೈ: ಜ್ವರ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಸೆಪ್ಟಂಬರ್ 22ರಂದು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಜಯಲಲಿತಾ ನಿಧನರಾಗುವವರೆಗೆ ತಮ್ಮೊಂದಿಗಿದ್ದ ಒಡನಾಟವನ್ನು ಆಸ್ಪತ್ರೆ ಸಿಬ್ಬಂದಿ ಹಂಚಿಕೊಂಡಿದ್ದಾರೆ. ಜಯಲಲಿತಾ ಡಿಸೆಂಬರ್ 4ರಂದು ಸಂಜೆ ಹೃದಯ ಸ್ತಂಭನಕ್ಕೆ ಒಳಗಾಗುವ ಮೊದಲು ಹಳೆಯ ತಮಿಳು ಧಾರಾವಾಹಿ ವೀಕ್ಷಿಸುತ್ತಿದ್ದರಂತೆ.

ಮೂವರು ನರ್ಸ್ಗಳು ಆಪ್ತರಾಗಿದ್ದರು: ಜಯಲಲಿತಾರ ಆರೈಕೆಗೆ 16 ನರ್ಸ್ಗಳನ್ನು ನೇಮಕಗೊಳಿಸಲಾಗಿತ್ತು. ಇವರಲ್ಲಿ ಸಿವಿ ಶೀಲಾ, ಎಂವಿ ರೇಣುಕಾ ಮತ್ತು ಸಮುಂದೀಶ್ವರಿ ಎಂಬ ಮೂವರು ನರ್ಸ್ಗಳು ಜಯಲಲಿತಾರಿಗೆ ಬಹಳ ಆಪ್ತರಾಗಿದ್ದರು.

ಕಷ್ಟವಾದರೂ ಆಹಾರ ಸೇವಿಸಲು ಪ್ರಯತ್ನಿಸುತ್ತಿದ್ದರು: ಕೆಲವು ಸಂದರ್ಭಗಳಲ್ಲಿ ‘ನಾನೇನು ಮಾಡಬೇಕು ಹೇಳಿ, ನಾನದನ್ನು ಮಾಡುತ್ತೇನೆ’ ಎಂದು ಹೇಳುತ್ತಿದ್ದರು. ನಾವು ಕೊಠಡಿ ಒಳಗೆ ಬಂದಾಗ ಮುಗುಳ್ನಗುತ್ತಿದ್ದರು. ಮಾತನಾಡುತ್ತಿದ್ದರು. ನಮ್ಮ ಆರೈಕೆಗೆ ಸಹಕರಿಸುತ್ತಿದ್ದರು. ಕಷ್ಟವಾಗುತ್ತಿದ್ದರೂ ಆಹಾರ ಸೇವಿಸಲು ಪ್ರಯತ್ನಿಸುತ್ತಿದ್ದರು. ಹೆಚ್ಚಾಗಿ ಉಪ್ಮಾ, ಪೊಂಗಲ್ ಅಥವಾ ಮೊಸರನ್ನ, ಆಲೂಗಡ್ಡೆ ಕರಿ ಸೇವಿಸುತ್ತಿದ್ದರು. ಆಸ್ಪತ್ರೆಗೆ ದಾಖಲಾದ ಮೊದಲ ದಿನ ಚಿಕಿತ್ಸೆ ಪಡೆದು ಸುಧಾರಿಸಿಕೊಂಡ ನಂತರ ಸ್ಯಾಂಡ್ವಿಚ್ ಮತ್ತು ಕಾಫಿ ತರಿಸಿಕೊಂಡಿದ್ದರು ಎಂದು ನರ್ಸ್ ಸಿವಿ ಶೀಲಾ ನೆನಪಿಸಿಕೊಂಡರು.

ಚರ್ಮದ ಬಗ್ಗೆ ನಿಗಾ ವಹಿಸಿ: ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಜತೆ ಜಯಲಲಿತಾ ಮಾತನಾಡುತ್ತಿದ್ದರು. ಚರ್ಮದ ಆರೈಕೆ ಬಗ್ಗೆ ಸಾಕಷ್ಟು ಸಲಹೆಗಳನ್ನು ಕೊಡುತ್ತಿದ್ದರು. ಎಷ್ಟೇ ಬ್ಯುಸಿ ಇದ್ದರೂ, ಮಹಿಳೆಯರು ತಮಗಾಗಿ ಸ್ವಲ್ಪ ಸಮಯ ಮೀಸಲಿರಿಸಿಕೊಳ್ಳುವುದು ಬಹಳ ಉತ್ತಮ ಎಂದು ಹಲವು ಬಾರಿ ಹೇಳುತ್ತಿದ್ದರು. ನವೆಂಬರ್ 22ರಂದು ತಂಜಾವೂರು, ಅರ್ವಕುರ್ಚಿ ಮತ್ತು ತಿರುಪರನ್ಕುದ್ರಂ ಕ್ಷೇತ್ರಗಳಲ್ಲಿ ಎಐಎಡಿಎಂಕೆ ಗೆಲುವು ಸಾಧಿಸಿದ್ದನ್ನು ಜಯಾ ನ್ಯೂಸ್ನಲ್ಲಿ ನೋಡಿ ಸಂತಸದಿಂದ ಮುಗುಳ್ನಕ್ಕರು ಎಂದು ವೈದ್ಯಕೀಯ ನಿರ್ದೇಶಕಿ ಡಾ. ಸತ್ಯಭಾಮ ತಿಳಿಸಿದರು.

ಮನೆಗೆ ಆಹ್ವಾನ ನೀಡಿದ್ದರು ಜಯಾ: ‘ಬನ್ನಿ, ನಮ್ಮ ಮನೆಗೆ ಹೋಗೋಣ. ನಿಮಗಾಗಿ ಕೊಡೈನಾಡಿನ ಉತ್ತಮ ಟೀ ಮಾಡಿಕೊಡುತ್ತೇನೆ’ ಎಂದು ಆಸ್ಪತ್ರೆಯ ಎಲ್ಲ ವೈದ್ಯರು ಮತ್ತು ಸಿಬ್ಬಂದಿಗೆ ಒಂದು ದಿನ ಆಹ್ವಾನ ನೀಡಿದ್ದರು’ ಎಂದು ತುರ್ತು ನಿಗಾ ತಜ್ಞ ಡಾ. ರಮೇಶ್ ವೆಂಕಟರಾಮನ್ ನೆನಪಿಸಿಕೊಂಡರು.

Comments are closed.