ರಾಷ್ಟ್ರೀಯ

ಮೋದಿ ಫೋಟೋ ಹಾಕಿ ಜಾಹೀರಾತು ನೀಡಿದ ಜಿಯೊಗೆ ವಿಧಿಸುವ ದಂಡ ಎಷ್ಟು ಗೊತ್ತಾ..?

Pinterest LinkedIn Tumblr

jio111

ನವದೆಹಲಿ: ದೇಶದಾದ್ಯಂತ ಸಾಕಷ್ಟು ಸುದ್ದಿಯಲ್ಲಿರುವ ರಿಲಯನ್ಸ್ ಜಿಯೋ ತನ್ನ ಜಾಹೀರಾತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚಿತ್ರವನ್ನು ಬಳಸಿಕೊಂಡಿರುವ ಕಾರಣಕ್ಕೆ ಕೇಂದ್ರ ಸರ್ಕಾರ ರಿಲಯನ್ಸ್ ಜಿಯೋಗೆ ದಂಡ ವಿಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಕಂಪನಿ ಅನುಮತಿ ಪಡೆಯದೆಯೇ ಜಾಹೀರಾತಿನಲ್ಲಿ ಮೋದಿಯವರ ಚಿತ್ರ ಬಳಕೆ ಮಾಡಿತ್ತು. ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಇದೀಗ ಕಂಪನಿ ದಂಡ ತೆರಲೇಬೇಕಾದ ಪರಿಸ್ಥಿತಿ ಎದುರಾಗಿದ್ದು, ರಿಲಯನ್ಸ್ ಕಂಪನಿಯಿಂದ ರು.500 ದಂಡ ವಸೂಲಿ ಮಾಡಲು ಗ್ರಾಹಕರ ವ್ಯವಹಾರಗಳ ಸಚಿವಾಲಯ ತೀರ್ಮಾನಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ರಿಲಯನ್ಸ್ ಜಿಯೊ ತನ್ನ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅವರ ಚಿತ್ರವನ್ನು ಬಳಸಿಕೊಳ್ಳಲು ಅನುಮತಿ ಪಡೆದಿರಲಿಲ್ಲ ಎಂದು ಪ್ರಧಾನಿ ಕಾರ್ಯಾಲಯ (ಪಿಎಂಒ) ರಾಜ್ಯಸಭೆಗೆ ಮಾಹಿತಿ ನೀಡಿತ್ತು. ಆದ್ರೂ ಜಿಯೊ ಜಾಹೀರಾತಿನಲ್ಲಿ ಮೋದಿ ಕಾಣಿಸಿಕೊಂಡಿರುವ ಬಗ್ಗೆ ಸಮಾಜವಾದಿ ಪಾರ್ಟಿಯ ಸಂಸದ ನೀರಜ್ ಶೇಖರ್ ಅವರು ಪ್ರಶ್ನೆ ಕೇಳಿದ್ದರು. ಇದಕ್ಕೆ ಪಿಎಂಒ, ಈ ಸಂಬಂಧ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಗ್ರಾಹಕ ವ್ಯವಹಾರಗಳ ಸಚಿವಾಲಯದ್ದು ಎಂದು ಪಿಎಂಒ ಲಿಖಿತ ಉತ್ತರ ನೀಡುವ ಮೂಲಕ ಸ್ಪಷ್ಟಪಡಿಸಿದೆ.

ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, `ಜಿಯೊ ತನ್ನ ಜಾಹೀರಾತಿನಲ್ಲಿ ಪ್ರಧಾನಿ ಮೋದಿ ಅವರ ಚಿತ್ರ ಬಳಸಿಕೊಂಡದ್ದು ಸರ್ಕಾರಕ್ಕೆ ತಿಳಿದಿತ್ತು. ಯಾವುದೇ ಕಂಪೆನಿ ಭಾರತದ ಪ್ರಧಾನಿ ಮತ್ತು ರಾಷ್ಟ್ರಪತಿ ಅವರ ಚಿತ್ರವನ್ನು ಬಳಸಿಕೊಳ್ಳುವ ಮೊದಲು ಪ್ರಧಾನಿ ಕಾರ್ಯಾಲಯದಿಂದ ಅನುಮತಿ ಪಡೆಯಬೇಕು. ಆದರೆ ಜಿಯೊ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಜಿಯೋ ನಿಯಮ ಉಲ್ಲಂಘಿಸಿದ್ದರ ವಿರುದ್ಧ ಗ್ರಾಹಕರ ವ್ಯವಹಾರಗಳ ಸಚಿವಾಲಯ ಕ್ರಮಕೈಗೊಳ್ಳುತ್ತದೆ’ ಎಂದರು.

ಹೊಸ ಮೊಬೈಲ್ ಸೇವೆ ಆರಂಭಿಸಿದ್ದ ರಿಲಯನ್ಸ್ ಕಂಪೆನಿಯು ಜಿಯೋಗೆ ಚಾಲನೆ ನಿಡಿದ ಬಳಿಕ ಪತ್ರಿಕೆಗಳಲ್ಲಿ ಪ್ರಕಟವಾದ ಹಾಗೂ ಟಿ.ವಿಗಳಲ್ಲಿ ಪ್ರಸಾರವಾದ ಕಂಪೆನಿಯ ಜಾಹೀರಾತಿನಲ್ಲಿ ಮೋದಿ ಅವರ ಚಿತ್ರವನ್ನು ಬಳಸಿಕೊಳ್ಳಲಾಗಿತ್ತು.

Comments are closed.