ರಾಷ್ಟ್ರೀಯ

ಲೋಕಸಭೆಯಲ್ಲಿ ನೋಟ್ ಗದ್ದಲ ! ಪಟ್ಟು ಬಿಡದ ವಿಪಕ್ಷ- ಕಲಾಪ ನಾಳೆಗೆ ಮುಂದೂಡಿಕೆ

Pinterest LinkedIn Tumblr

loka

ನವದೆಹಲಿ: ಲೋಕಸಭೆಯಲ್ಲಿ ಮಂಗಳವಾರವೂ ನೋಟು ನಿಷೇಧ ಗದ್ದಲ ಮುಂದುವರೆದಿದ್ದು, ವಿಪಕ್ಷಗಳ ಪ್ರತಿಭಟನೆಯಿಂದ ಗದ್ದಲ ನಿರ್ಮಾಣವಾದ ಹಿನ್ನಲೆಯಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ಬುಧವಾರಕ್ಕೆ ಮುಂದೂಡಿದ್ದಾರೆ.

ಪ್ರಮುಖವಾಗಿ ನೋಟು ನಿಷೇಧ ಕುರಿತಂತೆ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಹೇಳಿಕೆಯಿಂದ ಸಮಾಧಾನವಾಗದ ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪಟ್ಟು ಹಿಡಿದ ಹಿನ್ನಲೆಯಲ್ಲಿ ಸಭೆಯಲ್ಲಿ ವಾಗ್ವಾದ ಉಂಟಾಯಿತು. ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ವಿಪಕ್ಷ ಮುಖಂಡರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರಾದರೂ ಸಫಲವಾಗಲಿಲ್ಲ. ವಿಫಕ್ಷ ಮುಖಂಡ ಗದ್ದಲ ಮುಂದುವರೆದ ಕಾರಣ ಅನಿವಾರ್ಯವಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ನಾಳೆಗೆ ಕಲಾಪವನ್ನು ಮುಂದೂಡಿದರು.

ಇದಕ್ಕೂ ಮೊದಲು ಕೇಂದ್ರ ಸರ್ಕಾರ ನಿರ್ಧಾರವನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಕಪ್ಪುಹಣ ನಿಂಯತ್ರಿಸುವಲ್ಲಿ ಸರ್ಕಾರ ನೋಟು ನಿಷೇಧ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ. ಬಳಿಕ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ ಕೂಡ ಸರ್ಕಾರದ ಕ್ರಮವನ್ನು ಐತಿಹಾಸಿಕ ಎಂದು ಬಣ್ಣಿಸಿದರು. ಇಂದಿನಿಂದ ಮುಂದಿನ ದಿನಗಳಲ್ಲಿ ಜನರೇ ನರೇಂದ್ರ ಮೋದಿ ಅವರ ನಿರ್ಧಾರವೇ ಸರಿ ಎಂದು ಹೊಗಳುತ್ತಾರೆ ಎಂದು ಹೇಳಿದರು. ಅಂತೆಯೇ ನೋಟು ನಿಷೇಧದ ಬಳಿಕ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ಶಮನಕ್ಕೆ ಕೇಂದ್ರ ಸರ್ಕಾರ ಸಕಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಗ್ರಾಮೀಣ ಹಾಗೂ ನಗರಭಾಗಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹೊಸ ನೋಟುಗಳನ್ನು ಈಗಾಗಲೇ ರವಾನೆ ಮಾಡಲಾಗಿದ್ದು, ಜನರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಹೀಗಾಗಿ ಜನತೆ ಕಂಗಾಲಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಜೇಟ್ಲಿ ಅವರ ಉತ್ತರಕ್ಕೆ ಸಮಾಧಾನವಾಗದ ವಿಪಕ್ಷ ನಾಯಕರು ಖುದ್ಧು ಪ್ರಧಾನಿ ನರೇಂದ್ರ ಮೋದಿ ಅವರೇ ಕಲಾಪಕ್ಕೆ ಆಗಮಿಸಿ ಉತ್ತರಿಸಬೇಕು ಎಂದು ಕೇಳಿದಾಗ ಬಿಜೆಪಿ ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಉಭಯ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸ್ಪೀಕರ್ ಸುಮಿತ್ರಾ ಮಹಾಜನ್ 12 ಗಂಟೆಗೆ ಕಲಾಪವನ್ನು ಮುಂದೂಡಿದರು. ಬಳಿಕ ಕಲಾಪ ಆರಂಭವಾಯಿತಾದರೂ ಮತ್ತೆ ಗದ್ದಲ ಮುಂದುವರೆದಾಗ ಅನಿವಾರ್ಯವಾಗಿ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ನಿನ್ನೆಯಷ್ಟೇ ಇದೇ ವಿಚಾರವಾಗಿ ಕಲಾಪದಲ್ಲಿ ಗದ್ದಲ ಮಾಡಿದ್ದ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಟಿವಿಗಳಲ್ಲಿ ತೋರ್ಪಡಿಕೆಗಾಗಿ ಹಾಗೂ ಪ್ರಚಾರಕ್ಕಾಗಿ ಗದ್ದಲ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.

Comments are closed.