ರಾಷ್ಟ್ರೀಯ

ನೋಟುಗಳ ನಿಷೇಧ; ನನಗೆ 50 ದಿನಗಳ ಸಮಯ ಕೊಡಿ, ಆ ಬಳಿಕ ಎಲ್ಲವೂ ಸರಿ ಹೋಗುತ್ತದೆ: ಪ್ರಧಾನಿ ಮೋದಿ

Pinterest LinkedIn Tumblr

modi

ಆಗ್ರಾ: ಭಾರತೀಯ ಜನತಾ ಪಕ್ಷದ ಪರಿವರ್ತನ ರ್ಯಾಲಿ ಉತ್ತರ ಪ್ರದೇಶದ ಆಗ್ರಾಕ್ಕೆ ತಲುಪಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು.

ಸಾರ್ವಜನಿಕರಲ್ಲಿ 50 ದಿನಗಳ ಕಾಲಾವಕಾಶ ಕೇಳಿದ್ದೇನೆ. ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಬಹಳ ಕಠಿಣ ಪರಿಸ್ಥಿತಿ ಎದುರಾಗಬಹುದು ಎಂದು ನಾನು ಮೊದಲೇ ತಿಳಿಸಿದ್ದೆ. ನೋಟು ನಿಷೇಧದಿಂದ ಕಷ್ಟ ಅನುಭವಿಸುತ್ತಿದ್ದರೂ ಕೂಡ ಜನರು ಕಪ್ಪು ಹಣದ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ. ಈ ದೇಶದ ದಲಿತರು, ರೈತರು, ಬಡ ಜನರು ನನ್ನ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂಬ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದರು.

ತಮ್ಮ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧಿಸಿರುವುದರ ಹಿಂದಿನ ಪ್ರಯೋಜನಗಳ ಬಗ್ಗೆ ತಿಳಿಸಿದ ಮೋದಿ, ಇನ್ನು ಮುಂದೆ ಸಾಮಾನ್ಯ ಜನರು ತಾವು ಕಷ್ಟಪಟ್ಟು ದುಡಿದ ಹಣವನ್ನು ಕಪ್ಪು ಹಣವನ್ನಾಗಿ ಪರಿವರ್ತಿಸಿ ಲಂಚ ನೀಡಬೇಕಾದ ಪರಿಸ್ಥಿತಿ ಬರುವುದಿಲ್ಲ ಎಂದರು.

ನೋಟುಗಳ ನಿಷೇಧದ ವಿರುದ್ಧ ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಮಾತನಾಡಿದ ಮೋದಿ, ಚಿಟ್ ಫಂಡ್ ನಂತಹ ಯೋಜನೆಗಳು ಸಾಮಾನ್ಯ ಜನರಿಗೆ ಎಷ್ಟು ಮೋಸ ಮಾಡಿದೆ ಎಂಬುದನ್ನು ನೆನಪಿಸುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಸಾಮಾನ್ಯ ಜನರು ಕಷ್ಟಪಟ್ಟು ದುಡಿದ ಹಣ ರಾಜಕಾರಣಿಗಳ ಜೇಬು ತುಂಬಿಸುತ್ತಿದ್ದವು ಎಂದು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ನ ನಾಯಕರು ಅಕ್ರಮವಾಗಿ ಶಾರ್ದಾ ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸೂಚಿಸಿದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷಗಳ ಮೇಲೆ ತೀವ್ರ ವಾಗ್ದಾಳಿ ಮುಂದುವರಿಸಿದ ಪ್ರಧಾನಿ, ನೋಟುಗಳ ಅಪಮೌಲ್ಯೀಕರಣದ ವಿರುದ್ಧ ಪ್ರತಿಭಟನೆ ಮಾಡುವವರ ಬಳಿಯಿಂದ ನಾನು ಪ್ರಾಮಾಣಿಕತೆಯ ಸರ್ಟಿಫಿಕೇಟ್ ಪಡೆಯಬೇಕಾಗಿಲ್ಲ. ಎಲ್ಲಿಯವರೆಗೆ ದೇಶ ಸುಮ್ಮನೆ ಕುಳಿತುಕೊಳ್ಳಬೇಕು, ನಾವು ಯಾಕೆ ಭ್ರಷ್ಟಾಚಾರದ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು, 70 ವರ್ಷಗಳವರೆಗೆ ನಮ್ಮ ದೇಶವನ್ನು ಆಳಿದವರು ಈ ಅವ್ಯವಸ್ಥೆಯ ಬಗ್ಗೆ ತಿಳಿದಿದ್ದರು. ಆದರೆ ಅಧಿಕಾರದ ಆಸೆಯಿಂದ ಅವರು ಕ್ರಮ ಕೈಗೊಂಡಿರಲಿಲ್ಲ ಎಂದು ಪ್ರಧಾನಿ ರ್ಯಾಲಿಯಲ್ಲಿ ಹೇಳಿದರು.

ನಿಮ್ಮ ಖಾತೆಯನ್ನು ಬಳಸಿಕೊಂಡು ಕಪ್ಪು ಹಣವನ್ನು ಬಿಳಿ ಮಾಡಲು ಹೊರಟಿರುವ ಭ್ರಷ್ಟರ ಬಗ್ಗೆ ಜಾಗ್ರತೆವಹಿಸಿ. ನಾನು ಬಡವರು ಮತ್ತು ಮಧ್ಯಮ ವರ್ಗದವರ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇನೆ. ನಿಮ್ಮ ಬೆಂಬಲ ಮುಂದಿನ 50 ದಿನಗಳವರೆಗೆ ಬೇಕು. ಸರ್ಕಾರದ ಹೋರಾಟ ಭ್ರಷ್ಟಾಚಾರದ ವಿರುದ್ಧ, ನಮ್ಮ ದೇಶದ ಪ್ರಾಮಾಣಿಕ ಜನರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಬಾರದೆ? ನನಗೆ ಜನರು ಬೆಂಬಲ, ಸಹಕಾರ ನೀಡುವುದಿಲ್ಲವೇ ಎಂದು ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದರು.

Comments are closed.