ಲಖನೌ: ಭಾನುವಾರ ಮುಂಜಾನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದ ಇಂದೋರ್-ಪಾಟ್ನಾ ರೈಲು ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 100ಕ್ಕೇರಿದ್ದು, ಗಾಯಾಳು ಸಂಖ್ಯೆ 200ಕ್ಕೇರಿದೆ.
ಉತ್ತರ ಪ್ರದೇಶದ ಕಾನ್ಪುರದ ಪುಖರಾಯ ರೈಲ್ವೇ ನಿಲ್ದಾಣದ ಬಳಿ ದುರಂತ ಸಂಭವಿಸಿದ್ದು, ಒಟ್ಟು 14 ಬೋಗಿಗಳ ಪೈಕಿ 2 ಎಸಿ ಬೋಗಿಗಳು ನಜ್ಜುಗುಜ್ಜಾಗಿದೆ. ರೈಲಿನ ವೇಗ ಮತ್ತು ಅಪಘಾತದ ರಭಸಕ್ಕೆ ಎಸಿ ಬೋಗಿಯ ಹಿಂದೆ ಇದ್ದ ಎಸ್ ಸರಣಿಯ ಬೋಗಿಗಳು ಕೂಡ ಜಖಂ ಆಗಿದ್ದು, ಈ ಬೋಗಿಗಳಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಅಪಘಾತದ ರಭಸಕ್ಕೆ ಭೋಗಿಗಳು ಒಂದಕ್ಕೊಂದು ಬಡಿದಿದ್ದು, ಭೋಗಿಗಳನ್ನು ಬೇರ್ಪಡಿಸಲು ಗ್ಯಾಸ್ ಕಟರ್ ಬಳಕೆ ಮಾಡಲಾಗುತ್ತಿದೆ.
ಇನ್ನು ನಜ್ಜುಗುಜ್ಜಾದ ಭೋಗಿಗಳನ್ನು ಬೇರ್ಪಡಿಸುವ ಕಾರ್ಯ ಭರದಿಂದ ಸಾಗಿದ್ದು, ಭೋಗಿಗಳಲ್ಲಿ ಮತ್ತಷ್ಟು ಶವಗಳಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ವರೆಗೂ ಅಪಘಾತದಲ್ಲಿ ಗಂಭೀರವಾಗಿ ಹಾನಿಯಾದ ಭೋಗಿಗೆ ರಕ್ಷಣಾ ಸಿಬ್ಬಂದಿಗಳು ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಕ್ರೇನ್ ಗಳ ಸಹಾಯ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಈಗಾಗಲೇ ದೌಡಾಯಿಸಿದ್ದು, ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಅಧಿಕಾರಿಗಳಿಂದ ತತ್ ಕ್ಷಣದ ಮಾಹಿತಿಗಳನ್ನು ಪಡೆಯುತ್ತಿದ್ದಾರೆ. ಹಳಿಯಲ್ಲಿನ ಲೋಪವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಹಳಿಯಲ್ಲಿ ಲೋಪಕ್ಕೆ ಕಾರಣ ಏನು ಎಂದು ತನಿಖೆ ನಡೆಸಲಾಗುತ್ತಿದೆ.
ಕಳೆದ ಮಾರ್ಚ್ ನಲ್ಲಷ್ಟೇ ಉತ್ತರ ಪ್ರದೇಶದಲ್ಲಿ ರೈಲು ದುರಂತವೊಂದು ಸಂಭವಿಸಿ 39 ಮಂದಿ ಧಾರುಣ ಸಾವಿಗೀಡಾಗಿ 150 ಮಂದಿ ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.