ರಾಷ್ಟ್ರೀಯ

20,000  ರೂ.ನ ನಾಣ್ಯಗಳನ್ನು ನೀಡಿದ ಬ್ಯಾಂಕ್

Pinterest LinkedIn Tumblr

coinಕೃಪೆ: ಟ್ವಿಟರ್
ದೆಹಲಿ: ದೆಹಲಿಯ ದಸೋಲಾ ಎಂಬಲ್ಲಿರುವ ಜಾಮಿಯಾ ಸಹಕಾರಿ ಬ್ಯಾಂಕ್‍ನಲ್ಲಿ ಖಾತೆ ಹೊಂದಿದ್ದ ಸಾರ್ವಜನಿಕ ಸಂಪರ್ಕ ಅಧಿಕಾರಿ ಇಮ್ತಿಯಾಜ್ ಆಲಂ ಎಂಬವರು ತನ್ನ ಖಾತೆಯಿಂದ ₹20,000 ವಿತ್‍ಡ್ರಾ ಮಾಡಲು ಹೋಗಿದ್ದರು.

ಆದರೆ ಬ್ಯಾಂಕ್‍ನಲ್ಲಿ ನಗದು ಇರಲಿಲ್ಲ. ಇತ್ತ ಇಮ್ತಿಯಾಜ್ ಅವರಿಗೆ ಹಣದ ತುರ್ತು ಅಗತ್ಯವಿತ್ತು. ತನಗೆ ಹೇಗಾದರೂ ಮಾಡಿ ದುಡ್ಡು ಕೊಡಿ ಎಂದು ಇಮ್ತಿಯಾಜ್ ಒತ್ತಾಯಿಸಿದ್ದು, ಪ್ರಸ್ತುತ ಬ್ಯಾಂಕ್ ₹20,000 ನಗದು ನೀಡುವ ಬದಲು ಅಷ್ಟೇ ಮೌಲ್ಯದ ನಾಣ್ಯಗಳನ್ನು ನೀಡಿದೆ.

10 ರೂಪಾಯಿಯ ನಾಣ್ಯಗಳನ್ನು ಬ್ಯಾಂಕ್ ಇಮ್ತಿಯಾಜ್‍ ಅವರಿಗೆ ನೀಡಿದ್ದು, ಇದು 15 ಕೆಜಿಯಷ್ಟು ತೂಕವಿದೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಇಮ್ತಿಯಾಜ್, ಗರಿಷ್ಠ ಮುಖಬೆಲೆಯ ನೋಟುಗಳು ರದ್ದಾದ ನಂತರ ಎಟಿಎಂಗಳೂ ಕಾರ್ಯವೆಸಗುತ್ತಿರಲಿಲ್ಲ. ನಾನು ಖಾತೆಹೊಂದಿರುವ ಬ್ಯಾಂಕ್‍ನಲ್ಲಿ ನಗದು ಕೂಡಾ ಇರಲಿಲ್ಲ. ಗೋವಾಗೆ ಪ್ರವಾಸ ಹೊರಡುವುದಕ್ಕಾಗಿ ಹಣದ ತುರ್ತು ಅಗತ್ಯವಿತ್ತು. ಹಾಗಾಗಿ ಖಾತೆಯಿಂದ ಹಣ ವಿತ್‍ಡ್ರಾ ಮಾಡುವುದಕ್ಕಾಗಿ ಸರತಿ ಸಾಲಿನಲ್ಲಿ ಸುಮಾರು 5 ಗಂಟೆಗಳ ಕಾಲ ನಿಂತಿದ್ದೆ.

ಬ್ಯಾಂಕ್‍ನಲ್ಲಿ ನಾನು ಕೇಳಿದಷ್ಟು ನಗದು ಇರಲಿಲ್ಲ. ಏನಾದರೂ ಮಾಡಿ ನನಗೆ ಹಣ ಕೊಡಿ ಎಂದು ನಾನು ಬ್ಯಾಂಕ್ ಮ್ಯಾನೇಜರ್‍ ಗೆ ಒತ್ತಾಯಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್‍ನಿಂದ ಸಿಗುವ ನಗದು ಮೊತ್ತ ಕಡಿಮೆ. ಬ್ಯಾಂಕ್‍ನಲ್ಲಿ ನಗದು ಇಲ್ಲ, ಇದರ ಬದಲಿಗೆ ನಾಣ್ಯಗಳನ್ನು ಕೊಟ್ಟರೆ ಆದೀತೇ? ಎಂದು ಅವರು ನನ್ನಲ್ಲಿ ಕೇಳಿದರು.

ನಾನು ಅದಕ್ಕೆ ಒಪ್ಪಿದೆ. 15 ನಿಮಿಷಗಳಲ್ಲಿ ನನಗೆ ₹20,000 ಮೌಲ್ಯದ ನಾಣ್ಯಗಳನ್ನು ಕೊಟ್ಟರು. ಎಲ್ಲವನ್ನೂ ಬ್ಯಾಗ್‍ನಲ್ಲಿ ತುಂಬಿಸಿ, ಹೆಗಲ ಮೇಲೆ ಹೊತ್ತುಕೊಂಡು ನಾನು ಬಂದೆ ಎಂದು ಹೇಳಿದ್ದಾರೆ.

Comments are closed.