ರಾಷ್ಟ್ರೀಯ

ನೋಟು ನಿಷೇಧ ಪ್ರಶ್ನಿಸಿ ವಿವಿಧ ಹಂತಗಳ ಕೋರ್ಟ್ ಗಳಲ್ಲಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

Pinterest LinkedIn Tumblr

s-supreme-court

ನವದೆಹಲಿ: ನೋಟು ರದ್ದತಿಯನ್ನು ಪ್ರಶ್ನಿಸಿ ವಿವಿಧ ಹಂತಗಳ ಕೋರ್ಟ್ ಗಳಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ನೋಟುಗಳ ನಿಷೇಧ ತುಂಬಾ ಗಂಭೀರ ವಿಷಯವಾಗಿದ್ದು, ಕೆಳಹಂತದ ನ್ಯಾಯಾಲಯಗಳಲ್ಲಿ ನೋಟುಗಳ ನಿಷೇಧವನ್ನು ಪ್ರಶ್ನಿಸಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಬೇಕು ಹಾಗೂ ಸುಪ್ರೀಂ ಕೋರ್ಟ್ ನಲ್ಲೇ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಬೇಕು ಕೇಂದ್ರ ಸರ್ಕಾರದ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿತ್ತು. ಆದರೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾ. ಟಿಎಸ್ ಠಾಕೂರ್ ಹಾಗೂ ನ್ಯಾ.ಅನಿಲ್ ಆರ್ ದಾವೆ ನೇತೃತ್ವದ ಪೀಠ ಕೇಂದ್ರ ಸರ್ಕಾರದ ಮನವಿಯನ್ನು ತಿರಸ್ಕರಿಸಿದೆ. ಆದರೆ ಒಂದೇ ಹೈಕೋರ್ಟ್ ನಲ್ಲಿ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದ್ದು, ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಾಣೆ ನಡೆಸುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದ ವಾದಕ್ಕೆ ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್, ನೋಟುಗಳ ರದ್ದತಿಯಿಂದ ಜನರಿಗೆ ಅನಾನುಕೂಲವಾಗಿದೆ. ತಮ್ಮ ಅನುಕೂಲಕ್ಕಾಗಿ ಜನರು ಹೈಕೋರ್ಟ್ ಮೊರೆ ಹೋಗುತ್ತಿದ್ದು ಸಮಸ್ಯೆ ಉಂಟಾಗಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಂದಿನ ವಿಚಾರಣೆಯನ್ನು ನ.25 ಕ್ಕೆ ಮುಂದೂಡಿರುವ ಸುಪ್ರೀಂ ಕೋರ್ಟ್, ಎಲ್ಲಾ ಅರ್ಜಿಗಳನ್ನು ಒಂದೇ ಕೋರ್ಟ್ ಗೆ ವರ್ಗಾವಣೆ ಮಾಡುವ ಬಗ್ಗೆ ಅರ್ಜಿ ಸಲ್ಲಿಸಲು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿಗೆ ಸೂಚಿಸಿದೆ.

ನೋಟುಗಳ ನಿಷೇಧದ ನಿರ್ಧಾರದಿಂದ ಉಂಟಾಗಿರುವ ಅನಾನುಕೂಲವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರದ ಬಗ್ಗೆ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಗೆ ಎಜಿ ಮುಕುಲ್ ರೋಹ್ಟಗಿ ಮಾಹಿತಿ ನೀಡಿದ್ದು, ಪರಿಸ್ಥಿತಿಯ ಬಗ್ಗೆ ಪ್ರತಿ ದಿನ ಉನ್ನತ ಮಟ್ಟದ ಸಮಿತಿ ನಿಗಾವಹಿಸುತ್ತಿದ್ದು, ಪರಿಸ್ಥಿತಿ ಹಂತಹಂತವಾಗಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ವಾದಕ್ಕೆ ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್, ಕಳೆದ ವಿಚಾರಣೆ ವೇಳೆ ಪ್ರತಿದಿನಕ್ಕೆ ವ್ಯಕ್ತಿಯೊಬ್ಬರಿಗೆ 4,500 ರೂಗಳ ಮೊತ್ತದ ನೋಟುಗಳನ್ನು ಬದಲಾವಣೆ ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಈಗ ಮಿತಿಯನ್ನು 2000 ರೂ ಗಳಿಗೆ ಇಳಿಕೆ ಮಾಡಲಾಗಿದೆ ಏಕೆ ಎಂದು ಪ್ರಶ್ನಿಸಿದ್ದು, 1೦೦ ರೂಪಾಯಿ ನೋಟುಗಳ ಕೊರತೆ ಇದೆಯೇ ಎಂದು ಪ್ರಶ್ನಿಸಿದೆ.

ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸುವ ವೇಳೆ ಕಾಂಗ್ರೆಸ್ ನಾಯಕ, ಅಡ್ವೊಕೇಟ್ ಕಪಿಲ್ ಸಿಬಲ್ ಅವರು ಕೋರ್ಟ್ ನ್ನು ರಾಜಕೀಯ ವೇದಿಕೆಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎಜಿ ಮುಕುಲ್ ರೋಹ್ಟಗಿ ಆರೋಪ ಮಾಡಿದ್ದಾರೆ. ಕಪಿಲ್ ಸಿಬಲ್ ಅವರು ನೋಟುಗಳ ನಿಷೇಧದ ವಿಚಾರದಲ್ಲಿ ಅವರ ಪಕ್ಷವನ್ನು ಪ್ರತಿನಿಧಿಸಿ ಮಾತನಾಡುತ್ತಿದ್ದ ರೀತಿಯಲ್ಲೇ ಕೋರ್ಟ್ ನಲ್ಲೂ ವಾದ ಮಂಡಿಸಿತ್ತಿದ್ದಾರೆ ಎಂಬ ಅಟಾರ್ನಿ ಜನರಲ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕಪಿಲ್ ಸಿಬಲ್, ಸರ್ಕಾರದ ನೀತಿಗಳನ್ನು ಟೀಕಿಸುವ ವಾಕ್ ಸ್ವಾತಂತ್ರ್ಯ ನನಗಿದೆ, ನಾನು ಜನರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದೇನೆಯೇ ಹೊರತು ರಾಜಕೀಯವನ್ನಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ವಾದವನ್ನು ಆಲಿಸಿದ ಕೋರ್ಟ್, ಕೇಂದ್ರ ಸರ್ಕಾರ ನೋಟುಗಳ ನಿಷೇಧದ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬುದಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದ್ದು ನ.25ಕ್ಕೆ ವಿಚಾರಣೆಯನ್ನು ಮುಂದೂಡಿದೆ.

Comments are closed.