ರಾಷ್ಟ್ರೀಯ

ಐಡಿ ಇಲ್ಲದೆ 6 ಲಕ್ಷ ರೂ. ಬದಲಾವಣೆ: ಸಿಂಡಿಕೇಟ್ ಬ್ಯಾಂಕ್‍ನ ಇಬ್ಬರು ಅಮಾನತು

Pinterest LinkedIn Tumblr

syndicate-bank-logoಹೈದರಾಬಾದ್: ಐಡಿ ಕಾರ್ಡ್ ಇಲ್ಲದೆ 6 ಲಕ್ಷ ರೂ. ಮೊತ್ತದ ನೋಟು ಬದಲಾಯಿಸಿದ ಹಿನ್ನೆಲೆಯಲ್ಲಿ ಹೈದರಾಬಾದ್‍ನಲ್ಲಿ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ.

ಬ್ರ್ಯಾಂಚ್ ಮ್ಯಾನೇಜರ್ ನರಸಯ್ಯ ಅವರು ಕ್ಯಾಷಿಯರ್ ರಾಧಿಕಾ ಹಾಗೂ ಕ್ಲರ್ಕ್ ಮಲ್ಲೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಇವರಿಬ್ಬರೂ ಬ್ಯಾಂಕ್ ಶಾಖೆಯಿಂದ ಐಡಿ ಕಾರ್ಡ್ ದಾಖಲೆ ತೋರಿಸದೆ 6 ಲಕ್ಷ ರೂ. ಹಣ ಬದಲಾವಣೆ ಮಾಡಿದ್ದಾರೆ ಎಂದು ವಂಚನೆ ಪ್ರಕರಣ ದಾಖಲಾಗಿದೆ. 6 ಲಕ್ಷ ರೂ. ಹಳೆಯ ನೋಟುಗಳನ್ನು ಬ್ಯಾಂಕ್‍ನಲ್ಲಿಟ್ಟು ಇಬ್ಬರೂ ಬಳಿಕ ಅಷ್ಟೇ ಮೊತ್ತದ ಹಣವನ್ನು ಬ್ಯಾಂಕ್‍ನಿಂದ ತೆಗೆದುಕೊಂಡು ಹೋಗಿದ್ದರು.

ಸರೂರ್‍ನಗರ ಠಾಣೆ ಇನ್ಸ್‍ಪೆಕ್ಟರ್ ಎಸ್.ಲಿಂಗಯ್ಯ ಅವರು ಬ್ಯಾಂಕ್ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿರುವುದನ್ನು ಖಚಿತಪಡಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಆಂತರಿಕ ಪರಿಶೋಧನೆ ವೇಳೆ ಇಬ್ಬರು ಸಿಬ್ಬಂದಿಯ ಕೈಚಳಕ ಪತ್ತೆಯಾಗಿದೆ. ತಕ್ಷಣ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ಲಿಂಗಯ್ಯ ತಿಳಿಸಿದ್ದಾರೆ.

ಅಮಾನತಾದ ತಕ್ಷಣ ಮಲ್ಲೇಶ್ 5 ಲಕ್ಷದ 60 ಸಾವಿರ ರೂಪಾಯಿಗಳನ್ನು ಬ್ಯಾಂಕ್ ಅಧಿಕಾರಿಗಳಿಗೆ ವಾಪಸ್ ಕೊಟ್ಟಿದ್ದಾನೆ. ಇದನ್ನು ನನಗೆ ಕ್ಯಾಷಿಯರ್ ರಾಧಿಕಾ ನೀಡಿದ್ದರು ಎಂದು ಬ್ಯಾಂಕ್ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾನೆ. ವಂಚನೆ ಆರೋಪದಡಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಪೊಲೀಸರು ಶೀಘ್ರವೇ ಬಂಧಿಸುವ ಸಾಧ್ಯತೆಯಿದೆ.

ಆರ್‍ಬಿಐನ ಮೊದಲ ನಿರ್ದೇಶನದ ಪ್ರಕಾರ ಓರ್ವ ವ್ಯಕ್ತಿ ಕೇವಲ 4,000 ರೂ.ಗಳನ್ನು ಮಾತ್ರ ಬದಲಾವಣೆ ಮಾಡಬಹುದು ಎಂದಿತ್ತು. ನಿನ್ನೆ ಇದನ್ನು 4,500 ರೂ.ಗೆ ಏರಿಸಲಾಗಿದೆ.

Comments are closed.