ಚೆನ್ನೈ: ಜನರು ಹಾಗೂ ಪಕ್ಷದ ಕಾರ್ಯಕರ್ತರ ಪ್ರಾರ್ಥನೆಯ ಫಲವಾಗಿ ನನಗೆ ಮರುಜನ್ಮ ಸಿಕ್ಕಿದೆ. ನಿಮ್ಮೆಲ್ಲರ ಪ್ರೀತಿ ಹೀಗಿರಬೇಕಾದರೆ ನನಗೆ ಯಾವ ತೊಂದರೆಯೂ ಆಗಲ್ಲ ಎಂದು ತಮಿಳುನಾಡು ಸಿಎಂ ಜಯಲಲಿತಾ ಹೇಳಿದ್ದಾರೆ.
ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಅವರ 2 ಪುಟಗಳ ಪತ್ರಿಕಾ ಹೇಳಿಕೆಯನ್ನು ಎಐಎಡಿಎಂಕೆ ಬಿಡುಗಡೆ ಮಾಡಿದೆ.
ನಾನು ಸಂಪೂರ್ಣ ಗುಣಮುಖಳಾಗಿ ನಿಮ್ಮ ಸೇವೆ ಮಾಡಲು ಕಾಯುತ್ತಿದ್ದೇನೆ. ನನ್ನನ್ನು ಎಂಜಿಆರ್ ಅವರು ರಾಜಕೀಯಕ್ಕೆ ಸೇರಿಸಿದ ನಂತರ ನಾನು ಜನರಿಗಾಗಿ ದುಡಿಯುತ್ತಿದ್ದೇನೆ. ಹಲವಾರು ಮಂದಿ ನನಗೋಸ್ಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಯಿತು. ನೀವೆಲ್ಲರೂ ಜನರಿಗಾಗಿ ದುಡಿಯಬೇಕು. ನಿಮ್ಮನ್ನು ಕಳೆದುಕೊಳ್ಳುವುದು ನನಗೆ ಸಾಧ್ಯವಿಲ್ಲ ಎಂದು ಹೇಳಿಕೆಯಲ್ಲಿ ಹೇಳಿದ್ದಾರೆ.
ನವೆಂಬರ್ 19ರಂದು ಉಪಚುನಾವಣೆ ಬರುತ್ತಿದೆ. ಖುದ್ದಾಗಿ ಬಂದು ಪ್ರಚಾರ ಮಾಡಲು ನನಗೆ ಸಾಧ್ಯವಾಗಿಲ್ಲ. ಆದರೆ ನನ್ನ ಹೃದಯ ನಿಮ್ಮ ಜೊತೆಗಿದೆ. ಅರವರಣಕುರಿಚ್ಚಿ, ತಿರುಪರಣ್ಕುಂಡ್ರಂ, ಪಾಂಡಿಚೇರಿ ಹಾಗೂ ತಂಜಾವೂರು ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ನೀವು ಮತ ಚಲಾಯಿಸುವಾಗ ನಾನು ನಿಮಗಾಗಿ ತಂದ ಜನಸ್ನೇಹಿ ಯೋಜನೆಗಳನ್ನು ನೆನಪಿಸಿಕೊಂಡು ಮತದಾನ ಮಾಡಿ ಎಂದು ಕರೆ ನೀಡಿದ್ದಾರೆ.
ಕಳೆದ ಸೆಪ್ಟೆಂಬರ್ 22ರಿಂದ ಜಯಲಲಿತಾ ಅವರು ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಪತ್ರಿಕಾ ಹೇಳಿಕೆ ಹೊರತುಪಡಿಸಿ ಬೇರೆ ಯಾವ ರೀತಿಯಲ್ಲೂ ಜಯಲಲಿತಾ ಜನರ ಮುಂದೆ ಕಾಣಿಸಿಕೊಂಡಿಲ್ಲ.