ಬೆಳಗಾವಿ: ‘ನೋಟು ರದ್ದು’ ನಿರ್ಧಾರದಿಂದಾಗಿ ಮುಗ್ದ ಜನರಿಗೆ ಕಷ್ಟವಾಗುತ್ತಿದೆ ನಿಜ. ಆದರೆ ಡಿಸೆಂಬರ್ 30ರವರೆಗೆ ನಮ್ಮೊಂದಿಗೆ ಸಹಕರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
₹500 ಮತ್ತು ₹1000 ಮುಖಬೆಲೆ ನೋಟು ರದ್ದು ಮಾಡುವುದರಿಂದ ಸಾಮಾನ್ಯ ಜನರು ಕಷ್ಟ ಅನುಭವಿಸುತ್ತಿದ್ದಾರೆ. ನಮ್ಮ ಸರ್ಕಾರ ಮುಗ್ದ ಜನರಿಗೆ ತೊಂದರೆ ಮಾಡಲು ಬಯಸುವುದಿಲ್ಲ. ಅದೇ ವೇಳೆ ತಪ್ಪು ಮಾಡಿದವರನ್ನು ಶಿಕ್ಷಿಸದೇ ಬಿಡುವುದಿಲ್ಲ. ಡಿಸೆಂಬರ್ 30ರ ವರೆಗೆ ನಮಗೆ ಸಹಕಾರ ನೀಡಿ ಎಂದು ಕೆಎಲ್ಇ ಸಂಸ್ಥೆ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಮೋದಿ ಹೇಳಿದ್ದಾರೆ.
ಕೆಎಲ್ಇ ಸಂಸ್ಥೆಯನ್ನು ಶ್ಲಾಘಿಸಿದ ನಂತರ ನೋಟು ರದ್ದು ನಿರ್ಧಾರದ ಬಗ್ಗೆ ಮಾತನಾಡಿದ ಪ್ರಧಾನಿ, ನಾವು ₹500 ಮತ್ತು ₹1000 ನೋಟುಗಳನ್ನು ರದ್ದು ಮಾಡಿದ್ದು ಯಾಕೆ? ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಅಂದಹಾಗೆ ಅವರು 25 ಪೈಸೆಯನ್ನು ರದ್ದು ಮಾಡಿದಾಗ ನಾನು ಅವರನ್ನು ಪ್ರಶ್ನಿಸಿದ್ದೆನೇ?. ಕಾಂಗ್ರೆಸ್ 25 ಪೈಸೆಯನ್ನು ರದ್ದು ಮಾಡಿತು, ಯಾಕೆಂದರೆ ಅದು ಅವರ ಅಧಿಕಾರದ ಮಿತಿಯಲ್ಲಿತ್ತು.
2012, 2013 ಮತ್ತು 2014ರ ಮೊದಲಾರ್ಧದಲ್ಲಿ ಯಾವುದು ಸುದ್ದಿಯಾಗಿದ್ದು ಹೇಳಿ? ಹಗರಣಗಳು ಮತ್ತು ಭ್ರಷ್ಟಾಚಾರಗಳು ಅಲ್ಲವೇ.
ನವೆಂಬರ್ 8ರ ನಂತರ ಅವರ ಪರಿಸ್ಥಿತಿಯನ್ನು ನೋಡಿ. ನವೆಂಬರ್ 8ರ ರಾತ್ರಿ ದೇಶದಲ್ಲಿರುವ ಬಡವರು ಸುಖವಾಗಿ ನಿದ್ದೆ ಮಾಡಿದರು. ಧನಿಕರು ನಿದ್ದೆ ಮಾತ್ರೆ ಖರೀದಿಸಲು ಹೊರಗೆ ಹೋದರು.
ಇಲ್ಲಿ ನೋವಿದೆ, ಆದರೆ ಆ ನೋವಿನಿಂದ ದೇಶಕ್ಕೆ ಲಾಭವಾಗುತ್ತಿದೆ. ಗಂಗಾ ನದಿಗೆ 25 ಪೈಸೆ ನಾಣ್ಯ ಎಸೆಯದೇ ಇದ್ದವರು ಈಗ ₹500 ಮತ್ತು ₹1000 ನೋಟುಗಳನ್ನೆಸೆಯುತ್ತಿದ್ದಾರೆಎಂದು ಹೇಳಿದ ಪ್ರಧಾನಿ ಡಿಸೆಂಬರ್ 30ರ ನಂತರವೂ ತಾನು ತನ್ನ ಕಾರ್ಯಾಚರಣೆಗಳನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.
Comments are closed.