ನವದೆಹಲಿ (ಪಿಟಿಐ): ದಟ್ಟ ಹೊಗೆ ಆವರಿಸಿರುವ ಕಾರಣ ದೆಹಲಿಯ ಮೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳಿಗೆ ಶನಿವಾರ ರಜೆ ನೀಡಲಾಗಿದೆ.
ವಾಯು ಮಾಲಿನ್ಯ ಹೆಚ್ಚುತ್ತಿರುವ ಕಾರಣ ಶುಕ್ರವಾರ ನಡೆದ ಪಾಲಿಕೆ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
‘ದಟ್ಟ ಹೊಗೆ ಮತ್ತು ವಾಯು ಮಾಲಿನ್ಯದ ಕಾರಣದಿಂದಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಪರಿಸ್ಥಿತಿ ಅವಲೋಕಿಸಿ ರಜೆ ಮುಂದುವರಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲಾಗುವುದು’ ಎಂದು ದಕ್ಷಿಣ ದೆಹಲಿ ಮಹಾನಗರ ಪಾಲಿಕೆ (ಎಸ್‌ಡಿಎಂಸಿ) ವಿರೋಧ ಪಕ್ಷದ ನಾಯಕ ಸುಭಾಷ್ ಆರ್ಯ ತಿಳಿಸಿದ್ದಾರೆ.
ಕಳೆದ 17 ವರ್ಷಗಳಲ್ಲಿ ನಗರದಲ್ಲಿ ಈ ಪ್ರಮಾಣದಲ್ಲಿ ಯಾವತ್ತೂ ಹೊಗೆ ಆವರಿಸಿಕೊಂಡಿರಲಿಲ್ಲ.
ದಕ್ಷಿಣ ದೆಹಲಿ ಮಹಾನಗರ ಪಾಲಿಕೆ, ಉತ್ತರ ದೆಹಲಿ ಮಹಾನಗರ ಪಾಲಿಕೆ (ಎನ್‌ಡಿಎಂಸಿ) ಮತ್ತು ಪೂರ್ವ ದೆಹಲಿ ಮಹಾನಗರ ಪಾಲಿಕೆಯಡಿ (ಇಡಿಎಂಸಿ) ನಡೆಯುತ್ತಿರುವ ಶಾಲೆಗಳಲ್ಲಿ 10 ಲಕ್ಷ ವಿದ್ಯಾರ್ಥಿಗಳಿದ್ದಾರೆ.
ವಾಯು ಮಾಲಿನ್ಯ ಹೆಚ್ಚುತ್ತಿರುವುದರಿಂದ ಮಕ್ಕಳು ಮನೆಯ ಹೊರಗೆ ಬರದಿರಲು ಮತ್ತು ಆರೋಗ್ಯದ ಎಚ್ಚರಿಕೆ ಹೊರಡಿಸುವಂತೆ ವಿಜ್ಞಾನ ಮತ್ತು ಪರಿಸರ ಕೇಂದ್ರವು ಗುರುವಾರ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಇಟ್ಟಿಗೆ ಭಟ್ಟಿಗಳನ್ನು ಮುಚ್ಚುವಂತೆ ಸೂಚಿಸಬೇಕು ಮತ್ತು ದೆಹಲಿ ಭದ್ರಾಪುರ ಕೈಗಾರಿಕಾ ಘಟಕದಿಂದ ಹಾರುಬೂದಿ ವಾತಾವರಣ ಸೇರುವುದಕ್ಕೆ ತಡೆ ಸೇರಿದಂತೆ ವಾಯ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪರಿಸರ ಸಚಿವಾಲಯ ದೆಹಲಿ ಸರ್ಕಾರಕ್ಕೆ ತಿಳಿಸಿದೆ.
ಹೆಚ್ಚುತ್ತಿರುವ ವಾಯು ಮಾಲಿನ್ಯ–
ಎನ್‌ಜಿಟಿ ತರಾಟೆ : ನಗರದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕೇಂದ್ರ ಮತ್ತು ದೆಹಲಿ ಸರ್ಕಾರವನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
ದೆಹಲಿಯಲ್ಲಿ 17 ವರ್ಷಗಳಲ್ಲಿಯೇ ಅತಿ ಹೆಚ್ಚು ಎನಿಸುವಂಥ ದಟ್ಟಹೊಗೆ ಆವರಿಸಿದೆ. ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ, ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಬೇಡಿ ಎಂದು ಹಸಿರು ನ್ಯಾಯಮಂಡಳಿ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಕಿವಿಮಾತು ಹೇಳಿದೆ.
‘ಎಲ್ಲ ವಿಷಯದಲ್ಲೂ ದೆಹಲಿ ಜನರಿಗೆ ಅನ್ಯಾಯವಾಗುತ್ತಿದೆ. ಸರ್ಕಾರಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಸಮಸ್ಯೆ ಪರಿಹಾರಕ್ಕೆ ನಾವೇ ಏನಾದರೂ ಮಾಡಬೇಕು. ಕಾಲವೇ ಎಲ್ಲವನ್ನು ನಿರ್ಣಯಿಸುತ್ತದೆ ಎಂದು ನೀವೂ ಹೇಳಬಾರದು’ ಎಂದು ಎನ್‌ಜಿಟಿ ಮುಖ್ಯಸ್ಥ ಸ್ವತಂತ್ರ ಕುಮಾರ್ ನೇತೃತ್ವದ ಪೀಠ ಹೇಳಿದೆ.
‘ಜನರ ಆರೋಗ್ಯದ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಸರ್ಕಾರಗಳು ಆರೋಪ– ಪ್ರತ್ಯಾರೋಪದಲ್ಲಿ ತೊಡಗಿವೆ. ಇದು ತುಂಬಾ ಅಪಾಯಕಾರಿ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
10 ವರ್ಷಕ್ಕೂ ಮೇಲ್ಪಟ್ಟ ಡಿಸೇಲ್ ಚಾಲಿತ ವಾಹನಗಳ ಸಂಚಾರವನ್ನು ರಾಷ್ಟ್ರೀಯ ರಾಜಧಾನಿಯಲ್ಲಿ ನಿಲ್ಲಿಸಬೇಕು ಎಂದು ಎನ್‌ಜಿಟಿ ಪೀಠ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನೆರೆಯ ಹರಿಯಾಣ, ಪಂಜಾಬ್ ಮತ್ತು ರಾಜಸ್ತಾನಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುವುದರಿಂದ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ ಎಂದು ದೆಹಲಿ ಸರ್ಕಾರದ ಪರ ಹಾಜರಾಗಿದ್ದ ವಕೀಲರು ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ತಂದರು.
‘ಇದು ಕೇವಲ ಕೃಷಿ ತ್ಯಾಜ್ಯ ಸುಡುವುದರಿಂದ ಅಲ್ಲ. ನಿಮ್ಮ ಪ್ರಕಾರ ಹರಿಯಾಣ, ಪಂಜಾಬ್ ಮತ್ತು ರಾಜಸ್ತಾನದಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುತ್ತಾರೆ ಎನ್ನುವುದಾದರೆ ಗಾಳಿಯೇ ಇಲ್ಲದೆ ಹೊಗೆ ಇಲ್ಲಿಗೆ (ದೆಹಲಿ) ಹೇಗೆ ಬರುತ್ತದೆ ಎಂದು ಪೀಠ ಪ್ರಶ್ನಿಸಿದೆ.
ಪಂಜಾಬ್, ಹರಿಯಾಣ ಮತ್ತು ರಾಜಸ್ತಾನ ಸರ್ಕಾರಗಳ ಪರಿಸರ ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೂ ಎನ್‌ಜಿಟಿ ನೋಟಿಸ್ ಜಾರಿ ಮಾಡಿದ್ದು ನವೆಂಬರ್ 8ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಗಂಭೀರ ಪರಿಸ್ಥಿತಿ
* 17 ವರ್ಷಗಳಲ್ಲಿಯೇ ಅತ್ಯಂತ ಗಂಭೀರ ಪರಿಸ್ಥಿತಿ
* ದೆಹಲಿಯ ಗಾಳಿಯ ಗುಣಮಟ್ಟ ‘ಗಂಭೀರ’ ಮತ್ತು ‘ಅತ್ಯಂತ ಕಳಪೆ’ ನಡುವೆ ಇದೆ
* ಮಂದ ಗಾಳಿ ಮತ್ತು ಮಂಜಿನಿಂದಾಗಿ ಮಾಲಿನ್ಯಕಾರಕಗಳು ಚೆದುರಿ ಹೋಗುತ್ತಿಲ್ಲ
* ಮುಂದಿನ 3–4 ದಿನದಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ
* 2.5 ಮೈಕ್ರೊ ಮೀಟರ್‌ನ ಅಪಾಯಕಾರಿ ಕಣಗಳ ಪ್ರಮಾಣ ಚದರ ಮೀಟರ್‌ಗೆ 225 ಇದ್ದರೆ, 10 ಮೈಕ್ರೊ ಮೀಟರ್‌ನ ಅಪಾಯಕಾರಿ ಕಣ 389ರಷ್ಟಿದೆ. ಇದು ಸುರಕ್ಷಿತ ಮಿತಿಗಿಂತ ಹತ್ತು ಪಟ್ಟಿಗೂ ಹೆಚ್ಚು
* ಹೆಚ್ಚು ಹೊತ್ತು ಈ ಪರಿಸರಕ್ಕೆ ತೆರೆದುಕೊಂಡರೆ ಆರೋಗ್ಯವಂತ ಜನರಲ್ಲಿ ಆರೋಗ್ಯದ ಸಮಸ್ಯೆ ಉಂಟಾಗಬಹುದು. ಸ್ವಲ್ಪ ಮಟ್ಟಿನ ಆರೋಗ್ಯ ಸಮಸ್ಯೆ ಇರುವವರ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು. ಗಂಭೀರ ಅನಾರೋಗ್ಯಪೀಡಿತರು ಶ್ವಾಸಕೋಶದ ಸಮಸ್ಯೆಗಳಿಗೆ ತುತ್ತಾಗಬಹುದು.