ಕರ್ನಾಟಕ

ಬಂಗಾಳಕೊಲ್ಲಿಯಲ್ಲಿ ಮತ್ತೊಮ್ಮೆ ವಾಯುಭಾರ ಕುಸಿತ: ಹಿಂಗಾರು ತಡ: ಕೃಷಿಗೆ ಹಿನ್ನಡೆ

Pinterest LinkedIn Tumblr

rainಬೆಂಗಳೂರು: ಕ್ಯಾಂಟ್‌ ಚಂಡಮಾರುತದಿಂದ ರಾಜ್ಯಕ್ಕೆ ಒಂದು ತಿಂಗಳು ತಡವಾಗಿದ್ದ ಈಶಾನ್ಯ ಹಿಂಗಾರು, ಮತ್ತೊಂದು ವಾಯುಭಾರ ಕುಸಿತದಿಂದ ಇನ್ನೂ 10 ದಿನ ತಡವಾಗಿ ಪ್ರವೇಶ ಪಡೆಯಲಿದೆ.

ವಾಡಿಕೆಯಂತೆ ಅಕ್ಟೋಬರ್‌ ತಿಂಗಳಿನಲ್ಲಿ 136 ಮಿ.ಮೀ ಹಿಂಗಾರು ಮಳೆಯಾಗಬೇಕಿತ್ತು. ಆದರೆ, ಕೇವಲ 29 ಮಿ.ಮೀ ಮಾತ್ರ ಮಳೆಯಾಗಿದೆ. ಹಿಂಗಾರು ಮಳೆ ರಾಜ್ಯದ ರೈತರ ನಿರೀಕ್ಷೆಯನ್ನು ಹುಸಿಗೊಳಿಸಿದ್ದು, ಸದ್ಯ ಶೇ 78ರಷ್ಟು ಹಿಂಗಾರು ಮಳೆ ಕೊರತೆಯಾಗಿದೆ. ಕಳೆದ 50 ವರ್ಷಗಳ ಇತಿಹಾಸದಲ್ಲೇ ಅಕ್ಟೋಬರ್‌ ಹೆಚ್ಚು ಮಳೆ ಕೊರತೆ ಎದುರಿಸಿದ ತಿಂಗಳಾಗಿ ದಾಖಲಾಗಿದೆ.

ರಾಜ್ಯದಲ್ಲಿ ಸತತ ಆರನೇ ವರ್ಷ ಬರಗಾಲ ಪರಿಸ್ಥಿತಿ ಎದುರಾಗಿದೆ. ಈಗಾಗಲೇ 139 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ.
‘ದಾಖಲೆಗಳ ಪ್ರಕಾರ ಕಳೆದ 50 ವರ್ಷಗಳಲ್ಲೇ ಈ ಅಕ್ಟೋಬರ್‌ ತಿಂಗಳಲ್ಲಿ ಅತೀ ಕಡಿಮೆ ಮಳೆ ಸುರಿದಿದೆ. ಕಳೆದ 100 ವರ್ಷಗಳಿಂದ ಅಕ್ಟೋಬರ್‌ ತಿಂಗಳಲ್ಲಿ ಎಷ್ಟು ಮಳೆ ಸುರಿದಿದೆ ಎನ್ನುವ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದರು.

ಈ ಹಿಂದೆ, 1988ರ ಅಕ್ಟೋಬರ್‌ ತಿಂಗಳಲ್ಲಿ ಅತೀ ಕಡಿಮೆ ಮಳೆ ಬಿದ್ದಿದ್ದು. ಆ ವರ್ಷ ಶೇ 70ರಷ್ಟು ಮಳೆ ಕೊರತೆ ಆಗಿತ್ತು. 1976 ಮತ್ತು 1986ರ ಅಕ್ಟೋಬರ್‌ ತಿಂಗಳಲ್ಲಿ ಕ್ರಮವಾಗಿ ಶೇ 65 ಮತ್ತು ಶೇ 58ರಷ್ಟು ಮಳೆ ಕೊರತೆ ತಲೆದೋರಿತ್ತು. 30 ಜಿಲ್ಲೆಗಳ ಪೈಕಿ ಬಳ್ಳಾರಿ, ಗದಗ ಜಿಲ್ಲೆಯಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಶೇ 95ಕ್ಕೂ ಹೆಚ್ಚು ಮಳೆ ಅಭಾವ ಆಗಿದೆ. ಬೀದರ್‌ ಜಿಲ್ಲೆಯಲ್ಲಿ ಮಾತ್ರ ಸರಾಸರಿ ಪ್ರಮಾಣಕ್ಕಿಂತ ಶೇ 15ರಷ್ಟು ಹೆಚ್ಚು ಮಳೆ ಸುರಿದಿದೆ.

‘ನೈರುತ್ಯ ಮುಂಗಾರಿನಲ್ಲಿ (ಜೂನ್‌– ಸೆಪ್ಟೆಂಬರ್‌) ಸರಾಸರಿ 839 ಮಿ.ಮೀ ಮಳೆ ಬೀಳಬೇಕು. ಈ ಸಲ 688 ಮಿ.ಮೀ ಮಳೆ ಬಿದ್ದಿದೆ. ಅಂದರೆ, ಶೇ 18ರಷ್ಟು ಕೊರತೆ ಉಂಟಾಗಿದೆ. ಈ ಅವಧಿಯ ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ಅತೀ ಕಡಿಮೆ ಪ್ರಮಾಣದ ಮಳೆ ಬಿದ್ದಿದೆ. ಮಳೆ ಅಭಾವದಿಂದ ವಾತಾವರಣದಲ್ಲಿ ತೇವಾಂಶ ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದರಿಂದ ಕೃಷಿ ಚಟುವಟಿಕೆ ಕುಂಠಿತವಾಗಿದೆ’ ಎಂದರು.

‘ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಚಂಡಮಾರುತ ಪಶ್ಚಿಮಕ್ಕೆ ಚಲಿಸಿದ್ದರೆ ದಕ್ಷಿಣ ರಾಜ್ಯಗಳಲ್ಲಿ ಉತ್ತಮ ಮಳೆ ಆಗುತ್ತಿತ್ತು. ಆದರೆ, ಅದು ಉತ್ತರಕ್ಕೆ ಚಲಿಸಿರುವುದರಿಂದ ಅದು ಪೂರ್ಣಗೊಳ್ಳುವವರೆಗೂ ರಾಜ್ಯದಲ್ಲಿ ಮಳೆಯಾಗುವುದಿಲ್ಲ. ಶನಿವಾರ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ನಂತರ 10 ದಿನಗಳು ಒಣ ಹವೆ ಇರಲಿದೆ.

‘ರಾಜ್ಯದಲ್ಲಿ ಹಿಂಗಾರು ಮಳೆ ವಾರ್ಷಿಕ ಮಳೆಯ ಶೇ 20ರಷ್ಟಿರುತ್ತದೆ. ಈ ಮೂಲಕ ರಾಜ್ಯದಲ್ಲಿ 32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತದೆ. ಆದರೆ, ಮಳೆ ಕೊರತೆಯಿಂದಾಗಿ 12 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಕೃಷಿ ಚಟುವಟಿಕೆ ಆಗಿದೆ. ಈಗ ಹಿಂಗಾರು ಮಳೆ ಆರಂಭದಲ್ಲೇ ಕೈಕೊಟ್ಟಿರುವುದರಿಂದ ಬಿತ್ತಿರುವ ಬೆಳೆಗಳ ಮೇಲೂ ದುಷ್ಪರಿಣಾಮ ಆಗಲಿದೆ’ ಎಂದು ಹೇಳಿದರು.

‘ಹಿಂಗಾರು ಅಕ್ಟೋಬರ್ ಅಂತ್ಯದಲ್ಲಿ ಆರಂಭವಾಗಿದ್ದರೂ ರಾಜ್ಯದಲ್ಲಿ ಮೂರು ದಿನಗಳಿಂದ ಮಾತ್ರ ಸದ್ದು ಮಾಡುತ್ತಿದೆ. ಕೇವಲ ಹಾಸನ, ಕೊಡಗು, ದಕ್ಷಿಣಕನ್ನಡ, ಮಂಡ್ಯ, ಮೈಸೂರು ಭಾಗಗಳಲ್ಲಿ ಮಳೆಯಾಗಿದೆ’ ಎಂದರು.

ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಹಾಸನ, ಕೊಡಗು, ದಕ್ಷಿಣಕನ್ನಡದಲ್ಲಿ ಮಳೆಯಾಗುತ್ತಿದೆ.

Comments are closed.