ರಾಷ್ಟ್ರೀಯ

ಬಿರಿಯಾನಿ ಆಸೆ ಹುಟ್ಟಿಸುವ ಪಾಕ್ ಸೈನಿಕರು….

Pinterest LinkedIn Tumblr

ಲೇಖನ: ಕೆ.ಜಿ. ಉತ್ತಯ್ಯ, ಲೆಫ್ಟಿನೆಂಟ್‌ ಕರ್ನಲ್‌
biriನಾನು ಸೇವೆ ಸಲ್ಲಿಸಿದ ಜಾಗದಲ್ಲಿ ಯಾವುದೇ ಯುದ್ಧಗಳು ನಡೆದಿಲ್ಲದಿದ್ದರೂ ಸದಾ ಪಾಕಿಸ್ತಾನ ಹಾಗೂ ಭಾರತದ ಸೇನೆಯ ಮಧ್ಯೆ ಗುಂಡಿನ ದಾಳಿಯ ಸದ್ದು ಕೇಳಿ­ಸು­ತ್ತಿತ್ತು. ಪ್ರತಿನಿತ್ಯ ಅಲ್ಲಿ ಗುಂಡಿನ ಸದ್ದು ಕೇಳಿಸುತ್ತಲೇ ಇರುತ್ತದೆ. ಸೈನಿಕ­ನಾಗಿ, ಸೇನಾ ಅಧಿಕಾರಿಯಾಗಿ ಕೆಲವೊ­ಬ್ಬರು ಮಾತ್ರ ಆಯ್ಕೆಯಾಗುತ್ತಾರೆ. ನಾನು ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸೇನಾಧಿಕಾರಿಯಾಗಿ ಸೇರುವ ದಿನ ರಾಷ್ಟ್ರ ಧ್ವಜದ ಮುಂದೆ ನಿಂತು ಪ್ರತಿಜ್ಞೆ ಮಾಡಿದೆ. ಸೇನೆಯಲ್ಲಿ ಕರ್ತವ್ಯ ನಿಷ್ಠೆ ತೋರಿಸಬೇಕು. ದೇಶಕ್ಕೆ ಮೊದಲ ಆದ್ಯತೆ, ಸೈನಿಕರ ರಕ್ಷಣೆ ಮುಖ್ಯ, ನಾನು ಮುಂದೆ ಹೋದರೆ ನನ್ನ ಹಿಂದೆ ಸೈನಿಕರು ಬಂದೇ ಬರಬೇಕೆಂದು ಪ್ರತಿಜ್ಞೆ ಮಾಡಿ ಸೈನ್ಯಕ್ಕೆ ಸೇರಿದೆ. ನಂತರ ಸೇನಾ ಜೀವನದಲ್ಲಿ ಸೆಕೆಂಡ್‌ ಲೆಫ್ಟಿನೆಂಟ್‌, ಲೆಫ್ಟಿನೆಂಟ್‌, ಕ್ಯಾಪ್ಟನ್‌, ಮೇಜರ್‌, ನಂತರ 1992ರಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಆಗಿ ಪದೋನ್ನತಿ ಪಡೆದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದೆ.

ಬಂದೂಕು ಚರ್ಚೆಗಾಗಿ ಗುಂಡಿನ ಚಕಮಕಿ: ಕಾಶ್ಮೀರದ ಗಡಿಯಲ್ಲಿ ಸೇನೆಯಲ್ಲಿರುವಾಗ ಪ್ರತೀ ದಿನ ಪಾಕಿಸ್ತಾನದ ಗ್ರಾಮಸ್ಥರು ನಮ್ಮ ದೇಶದ ಗಡಿಯೊಳಗೆ ನುಸುಳಿ ಹಸುವಿಗೆ ಹುಲ್ಲು ಕೊಯ್ಯಲು ಬರುತ್ತಿದ್ದರು. ಇದರಿಂದ ನಮಗೆ ಭಯ ಕೂಡ ಆಗಿತ್ತು. ಪಾಕಿಸ್ತಾನದ ಸೈನಿಕರು ಹುಲ್ಲು ಕೊಯ್ಯುವ ನೆಪದಲ್ಲಿ ಗಡಿ ನುಸುಳುವ ಆತಂಕ ಎದುರಾಗಿತ್ತು. ಪಾಕಿಸ್ತಾನದ ಗ್ರಾಮಸ್ಥರು ನಮ್ಮ ಗಡಿಯೊಳಗೆ ಬರಬಾರದೆಂದು ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಅವರ ಸೈನಿಕರಿಗೆ ಮಾಹಿತಿ ನೀಡಬೇಕೆಂದು ಚಿಂತಿಸಿದೆವು. ಹೀಗೆ ಒಂದು ದಿನ ಪಾಕಿಸ್ತಾನದ ಗಡಿಯ ಕಡೆಗೆ ಮೀಡಿಯಂ ಗನ್‌ಸೆಟ್‌ ಮಾಡಿ ನಮ್ಮ ಗಡಿ ಭಾಗದ ಬೆಟ್ಟದಿಂದ ಇಳಿದೆ. ಈ ಸಂದರ್ಭ ನನಗೆ ತೊಂದರೆಯಾದರೆ ತಿಳಿಸುತ್ತೇನೆ ಎಂದು ಐದು ಮಂದಿ ಸೈನಿಕರೊಂದಿಗೆ ಪಾಕಿಸ್ತಾನದ ಗಡಿಗೆ ತೆರಳಿದೆವು. ಈ ಸಂದರ್ಭ ಪಾಕ್‌ನ ಗಡಿ ಸೈನಿಕರು ಎಚ್ಚರಗೊಂಡರು. ನಮ್ಮ ಮೇಲೆ ಇನ್ನೇನು ದಾಳಿ ಮಾಡುತ್ತಾರೆ ಅಂದುಕೊಂಡಿದ್ದೆವು. ನಾನಾಗ ನನ್ನ ಹಿಂದೆ ಬರುತ್ತಿದ್ದ ಐದು ಮಂದಿ ಸೈನಿಕರನ್ನು ಕಾಣಿಸಿಕೊಳ್ಳಬೇಡಿ ಎಂದು ತಿಳಿಸಿದ್ದೆ. ಪಾಕ್‌ ಗಡಿಗೆ ತೆರಳಿದಾಗ ನನ್ನ ಕೈಯಲ್ಲಿ ಯಾವುದೇ ಆಯುಧ ಇರಲಿಲ್ಲ. ಈ ಬಗ್ಗೆ ಪಾಕ್‌ ಸೈನಿಕರಿಗೆ ಜೋರಾಗಿ ಕಿರುಚಿ ಹೇಳಿದೆ. ಈ ಸಂದರ್ಭ ಪಾಕಿಸ್ತಾನದ ಒಬ್ಬ ಸೈನಿಕ ಮರದ ಹಿಂದೆ ಮೆಲ್ಲನೆ ಬಂದು ‘‘ಏನು” ಎಂದು ಕೇಳಿದ. ‘‘ನಿಮ್ಮ ಅಧಿಕಾರಿ ಎಲ್ಲಿದ್ದಾರೆ ಅವರೊಂದಿಗೆ ಮಾತಾಡಬೇಕು”ಎಂದು ಹೇಳಿದೆ. ಆದರೆ ಅಲ್ಲಿ ಅವರ ಅಧಿಕಾರಿಗಳು ಇರಲೇ ಇಲ್ಲ. ಅವರು ಗಡಿಯಲ್ಲಿ ಮುಂಚೂಣಿಯಲ್ಲಿ ಇರುವುದಿಲ್ಲ ಎಂದು ತಿಳಿಯಿತು. ಆದರೆ ಭಾರತೀಯ ಸೇನಾ ಅಧಿಕಾರಿಗಳು ಸದಾ ತಮ್ಮ ತಂಡದ ನೇತೃತ್ವವಹಿಸಿ ಮುಂಚೂಣಿಯಲ್ಲಿರುತ್ತಾರೆ.

‘‘ನಿನ್ನೊಂದಿಗೆ ಮಾತಾಡಬೇಕು” ಎಂದು ಪಾಕ್‌ ಸೈನಿಕನನ್ನು ಕರೆದೆ. ಆತ ಮೆಲ್ಲ ಮೆಲ್ಲನೇ ನೋಡಿ ಗಡಿಯ ತೋಡಿನವರೆಗೆ ಬಂದ. ನಾನು ಆಗ ಅವನೊಂದಿಗೆ ಮಾತನಾಡಿ, ‘‘ನಿಮ್ಮ ಗ್ರಾಮದ ಜನರು ನಮ್ಮ ಗಡಿಯಲ್ಲಿ ನುಸುಳಿ ಬಂದು ಹುಲ್ಲು ಕೊಯ್ದುಕೊಂಡು ಹೋಗುತ್ತಿದ್ದಾರೆ. ಇನ್ನು ಮುಂದೆ ಬಾರದಂತೆ ನೀವು ನೋಡಿಕೊಳ್ಳಿ, ಬಂದರೆ ಮುಂದೆ ಪರಿಸ್ಥಿತಿ ನೆಟ್ಟಗಿರಲ್ಲ” ಎಂದು ಹೇಳಿದೆ.

‘‘ಸರಿ ಆಗಲಿ. ಇನ್ನು ನಮ್ಮ ಗ್ರಾಮದವರು ಬಾರದಂತೆ ನೋಡಿಕೊಳ್ಳುತ್ತೇವೆ” ಎಂದು ಪಾಕಿಸ್ತಾನದ ಸೈನಿಕ ತಿಳಿಸಿದ. ಪಾಕ್‌ ಸೈನಿಕನಿಗೆ ಸೂಚನೆ ನೀಡಿ ಹಿಂತಿರುಗುವಾಗ ನಾನು ಅಧಿಕಾರಿ ಎಂದು ತಿಳಿದುಕೊಂಡ ಆತ ಒಂದು ಕ್ಷಣ ನಿಲ್ಲಿ ಎಂದು ಹೇಳಿದ. ಈ ಸಂದರ್ಭ ನಾನು ‘‘ಏನು” ಎಂದು ಕೇಳಿದೆ. ಆಗ ಆತ ಕೈಕುಲಕಬೇಕೆಂದು ಇಚ್ಛಿಸಿದ. ತೋಡಿನ ಮೇಲೆ ಆತ ಅರ್ಧ ದೂರ ಮುಂದೆ ಬಂದರೆ, ನಾನು ಅರ್ಧ ದೂರ ಅವನ ಕಡೆಗೆ ಹೋದೆ. ಆ ಪಾಕ್‌ ಸೈನಿಕ ನನ್ನೊಂದಿಗೆ ಕೈಕುಲುಕಿದ. ನನ್ನ ಕೈಯಲ್ಲಿ ಯಾವುದೇ ಆಯುಧ ಇಲ್ಲದಿ­ರು­ವುದನ್ನು ಕಂಡು ಆತನಿಗೆ ನಾಚಿಕೆಯಾಯಿತು. ಆತ­ನಲ್ಲಿ ದೊಡ್ಡ ಬಂದೂಕು ಇತ್ತು. ನಾನಾಗ, ‘‘ನಿನ್ನ ರೈಫಲ್‌ ಚೆನ್ನಾಗಿದೆ. ಎಲ್ಲಿ ಮಾಡಿದ್ದು” ಎಂದು ಕೇಳಿದೆ. ನನ್ನ ಹಿಂದೆ ಅವಿತಿದ್ದ ನಮ್ಮ ಐದು ಮಂದಿ ಸೈನಿಕರು, ‘‘ಅದು ಚೀನಾದ ಬಂದೂಕು” ಎಂದು ನಕ್ಕರು. ಆತನಿಗೆ ಸಿಟ್ಟು ಬಂದು, ‘‘ಇದು ಚೀನಾ­ದ್ದಲ್ಲ, ಪಾಕಿಸ್ತಾನದ್ದು” ಎಂದು ಹೇಳಿದ. ಹೀಗೆ ಮಾತು ಜಾಸ್ತಿಯಾದರೆ ತೊಂದರೆಯಾಗುತ್ತದೆಂದು ಇಬ್ಬರೂ ಹಿಂದಕ್ಕೆ ಹೋದೆವು. ಇದೇ ಕಾರಣಕ್ಕಾಗಿ ಕಾಶ್ಮೀರದ ಗಡಿಯಲ್ಲಿ ಒಂದು ವಾರ ಕಾಲ ದೊಡ್ಡ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಯಿತು.

ಆ.14ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನ. ನಾವು ಅಂದು ಸಿಯಾಚಿನ್‌ನಲ್ಲಿದ್ದೆವು. ಈ ಸಂದರ್ಭ ಪಾಕ್‌ ಮೇಲೆ ದಾಳಿ ಮಾಡುವಂತೆ ಮೇಲಿನ ಸೇನಾ ಅಧಿಕಾರಿಗಳಿಂದ ಸೂಚನೆ ಬಂದಿತ್ತು. ನಾವಾಗ ಅಟ್ಲೇರಿ ಗನ್‌ನಿಂದ ಒಂದು ಸೂಕ್ಷ್ಮ ಪ್ರದೇಶದಲ್ಲಿ ನಿಂತು 20-30 ಕಿ. ಮೀ ದೂರಕ್ಕೆ ಗುರಿ ಇಟ್ಟೆವು. ನಮ್ಮ ಜೊತೆಗಿರುವ ಸೈನಿಕರು ಮ್ಯಾಪ್‌ನ್ನು ನೋಡಿ ಗನ್‌ ಸಮೀಪ ಇರುವವರಿಗೆ ಮಾಹಿತಿ ನೀಡುತ್ತಿ­ದ್ದರು. ಹೀಗೆ ಗುರಿ ಇಟ್ಟನಂತರ ಒಂದು ಗನ್‌ನಿಂದ ಆರು ಸುತ್ತು ಫೈರ್‌ ಮಾಡಲಾಯಿತು. ದುರ್ಗಮ ಪ್ರದೇಶದಲ್ಲಿ ಲಾಂಗ್‌ ರೇಂಜ್‌ ಗನ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ‘‘ನಾಳೆ (ಆ.15) ನಮ್ಮ ಸ್ವಾತಂತ್ರ್ಯ ದಿನಾಚರಣೆ. ನಮಗೆ ಪಾಕಿಸ್ತಾನಿಗಳು ಪ್ರತೀಕಾರ ಮಾಡಬಹುದು” ಎಂದು ನಮ್ಮ ಸೈನಿಕರು ಹೇಳುತ್ತಿದ್ದರು. ಆದರೆ ಅಲ್ಲಿ ಆದದ್ದೇ ಬೇರೆ. ಮರು­ದಿನ ಸಿಯಾಚಿನ್‌ನ ವಾತಾವರಣ ಹದಗೆಟ್ಟಿತ್ತು. ಮಂಜು ಮುಸುಕಿದ ವಾತಾವರಣವಾಗಿತ್ತು. ಇದರಿಂದ ಪಾಕಿಸ್ತಾನದ ಸೈನಿಕರಿಂದ ದಾಳಿ ಮಾಡಲು ಸಾಧ್ಯವಾಗಿಲ್ಲ. ನಂತರ ನಾಲ್ಕು ದಿನ ಕಳೆದು ಪಾಕಿ­ಸ್ತಾನಿ ಸೈನಿಕರು ದಾಳಿ ಮಾಡಿದರೂ ನಮ್ಮ ಮೇಲೆ ಅಷ್ಟೇನು ದೊಡ್ಡ ಪರಿಣಾಮ ಬೀರಲಿಲ್ಲ.
ಗಡಿಯಲ್ಲಿ ಪಾಕಿಸ್ತಾನದ ಸೈನಿಕರು ತಮಾಷೆ ಮಾಡುವುದೇ ಹೆಚ್ಚು. ‘ನೀವು ನಮ್ಮ ಮೇಲೆ ಗುಂಡು ಹಾರಿಸಬೇಕಾದರೆ ಇಂದಿರಾ ಗಾಂಧಿ ಅವರ ಆದೇಶ ಬೇಕು. ಆದರೆ ನಮಗೆ ಯಾವ ಆದೇಶವೂ ಬೇಕಿಲ್ಲ. ನಮಗೆ ನಾವೇ ಹೀರೋಗಳು’ ಎಂದು ನಮ್ಮನ್ನು ತಮಾಷೆ ಮಾಡುತ್ತಿದ್ದರು. ಈ ಸಂದರ್ಭ ನಾವು, ‘ಯಾರ ಕೈಯಲ್ಲಿ ಆದೇಶ ಇದೆ ಎಂದು ನಮ್ಮ ಗಡಿಯತ್ತ ಕಾಲಿಟ್ಟು ನೋಡಿ’ ಎಂದು ಉತ್ತರ ನೀಡುತ್ತಿದ್ದೆವು. ಅವರು ರಂಝಾನ್‌ ಹಬ್ಬದ ದಿನ ಗಡಿಭಾಗದಿಂದ ಬಿರಿಯಾನಿಯನ್ನು ತೋರಿಸುತ್ತಿದ್ದರು. ಆದರೆ ನಾವು ಅಲ್ಲಿಗೆ ತೆರಳದೆ ಸುಮ್ಮನಿರುತ್ತಿದ್ದೆವು.
ಕಾಶ್ಮೀರದ ಉತ್ತರ ಭಾಗ ಸಿಯಾಚಿನ್‌ ಯುದ್ಧ ಭೂಮಿಯಲ್ಲಿ ಪ್ರತಿದಿನವೂ ಗುಂಡಿನ ಸದ್ದು ಹೆಚ್ಚು. ನಾನು ಮೇಜರ್‌ ಆಗಿ ಕೆಲಸ ಮಾಡುತ್ತಿದ್ದೆ. ಒಂದು ದಿನ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಸೈನಿಕ ಬಂದು ಮನೆಯಲ್ಲಿ ತೊಂದರೆ ಇದೆ. ‘‘ನನಗೆ ರಜೆ ಬೇಕು” ಎಂದು ಕೋರಿ­ಕೊಂಡ. ಈ ಸಂದರ್ಭ ನಾನು, ‘‘ಈಗ ನನ್ನ ತಾಯಿ ಸಾವನ್ನ­ಪ್ಪಿದ್ದಾರೆ ಎಂದು ತಿಳಿಸಿದರೂ ನಾನು ಸೇನೆ­ಯಿಂದ ಹಿಂತಿರುಗುವುದಿಲ್ಲ” ಎಂದು ಹೇಳಿದೆ. ಆತನಿಗೆ ಕೆಲಸ ಮಾಡಲು ಉತ್ಸಾಹ ಕಡಿಮೆಯಾ­ಗಿತ್ತು. ನಮಗೆ ತೊಂದರೆಯಾದಾಗ ಮನೆಗೆ ಹೋಗಿ ಯಾವುದೇ ಪ್ರಯೋಜನವಿಲ್ಲ. ಆದರೆ ಆತ ಹೋಗ­ಲೇಬೇಕೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಆತನನ್ನು ಬೇಸ್‌ ಕ್ಯಾಂಪ್‌ಗೆ ಕಳುಹಿಸಿದೆ. ನಂತರ ಆತ ಮನೆಗೆ ತೆರಳಿದ್ದ. ಹೀಗೆ ರಜೆ ಕಳೆದು ಮತ್ತೆ ನಮ್ಮ ಸ್ಥಳಕ್ಕೆ ವಾಪಸ್ಸಾಗುವ ಸಂದರ್ಭ ಹಿಮಪಾತಕ್ಕೆ ಸಿಲುಕಿದ 20 ಮಂದಿಯ ತಂಡದಲ್ಲಿ 10 ಮಂದಿ ಜೀವಂತವಾಗಿ ಸಮಾಧಿಯಾದರು. ಅದರಲ್ಲಿ ಆ ಸೈನಿಕನೂ ಒಬ್ಬ.

ಉರಿ ಬದಿಯ ಲಿಪಾವ್ಯಾಲಿಯಲ್ಲಿ ಸೇವೆ ಮಾಡು­ವಾಗ ನಮ್ಮ ಗಡಿ ಪಹರೆ ಮಾಡುವ ಜಾಗ ಕಠಿಣವಾದದ್ದು. ಅಲ್ಲಿ ನಮಗೆ ರೂಟ್‌ ನೀಡಿರುತ್ತಾರೆ. ಅಲ್ಲಿ ನೆಲದಲ್ಲಿ ಸಿಡಿಮದ್ದು ಇಟ್ಟಿರುತ್ತಾರೆ. ನಾನು ಈ ಸಂದರ್ಭ ನಮ್ಮ ತಂಡದೊಂದಿಗೆ ಮುನ್ನುಗ್ಗಿದೆ. ಪುಣ್ಯಕ್ಕೆ ಯಾವ ಘಟನೆಯೂ ಸಂಭವಿಸಿಲ್ಲ. ಇಂತಹ ಹಲವಾರು ಘಟನೆಗಳು ನಡೆದಿದೆ. ಕಠಿಣವಾದ ಜಾಗದಲ್ಲಿ ಆಹಾರವನ್ನು ಸಂಗ್ರಹಿಸುವುದು ಸವಾಲಿನ ಕೆಲಸ. ಅಲ್ಲಿ ಪ್ಯಾರಾಶೂಟ್‌ಗಳ ಮೂಲಕ ಆಹಾರ ಪದಾರ್ಥಗಳನ್ನು ಕಳುಹಿಸುತ್ತಾರೆ. ನಂತರ ಅವುಗಳನ್ನು ಸಂಗ್ರಹಿಸಿ ನಮ್ಮ ಟೆಂಟ್‌ಗಳಲ್ಲಿ ಆಹಾರ ಸಿದ್ಧಪಡಿಸುತ್ತೇವೆ. ಒಂದೆಡೆ ನಮ್ಮ ಭೋಜನವಾಗುತ್ತಿದ್ದರೆ ಮತ್ತೊಂದೆಡೆ ಪಾಕಿಸ್ತಾನದ ಕಡೆಯಿಂದ ಗುಂಡಿನ ದಾಳಿ ನಡೆಯುತ್ತಲೇ ಇರುತ್ತದೆ.

ಪಾಕಿಸ್ತಾನಿ ಸೈನಿಕ ಅವನ ದೇಶಕ್ಕಾಗಿ ಸಾಯಲಿ, ನಾನು ನನ್ನ ದೇಶ ಸೇವೆ ಮಾಡುವ ಮೂಲಕ ಇರುತ್ತೇನೆ. ಸೈನಿಕರು ದಾಳಿ ಮಾಡುವುದು ರಾಜಕೀಯ ತಿರುವು ಪಡೆದುಕೊಳ್ಳುತ್ತದೆ. ಉರಿಯಲ್ಲಿ ದಾಳಿ ಪದೇ ಪದೇ ನಡೆಯುತ್ತಿರುತ್ತದೆ. ಅದೊಂದು ದಿನ ಪಾಕಿಸ್ತಾನಿ ಸೈನಿಕರು ನಮ್ಮ ದೇಶದ ಗೂರ್ಖ ಸೈನಿಕರೊಬ್ಬರನ್ನು ಕೊಂದರು. ಈ ಸಂದರ್ಭ ನಮ್ಮ­ವರ ಮೇಲೆ ದಾಳಿ ಮಾಡಿದವರನ್ನು ಕೊಂದು ಬರುವಂತೆ ಆದೇಶ ಸಿಕ್ಕಿತ್ತು. ನಂತರ ಸ್ಥಳಕ್ಕೆ ತೆರಳಿದ ಗೂರ್ಖಗಳು ಕುಕ್ರಿ ಆಯುಧದ ಮೂಲಕ ಲೈನ್‌ ಆಫ್‌ ಕಂಟ್ರೋಲ್‌ ಅನ್ನು ದಾಟಿ ಪಾಕಿಸ್ತಾನದ ಸೈನಿಕರನ್ನು ಕೊಂದು ಬಂದರು. ದಿನನಿತ್ಯವೂ ಪಾಕಿಸ್ತಾನದ ಸೈನಿಕರು ಕಾಶ್ಮೀರಕ್ಕೆ ನುಸುಳಿ ಬಂದು ಆತಂಕವಾದಿ ಕೃತ್ಯಗಳನ್ನು ಮಾಡುತ್ತಾರೆ. ಬಹಳಷ್ಟುಆತಂಕವಾದಿಗಳನ್ನು ಭಾರತೀಯ ಸೈನಿಕರು ಮಟ್ಟಹಾಕಿದ್ದಾರೆ.

ಹಿಂಬದಿಯಿಂದ ಹೊಡೆಯುವ ಪಾಕ್‌: ಭಯೋತ್ಪಾದಕರನ್ನು ಬಿಟ್ಟು ಪಾಕಿಸ್ತಾನ ಭಾರತದ ಸೈನಿಕರಿಗೆ ಹಿಂಬದಿಯಿಂದ ಹೊಡೆಯುವುದು ಹೆಚ್ಚು. ಪಾಕಿಸ್ತಾನದವರು ಯಾರನ್ನೂ ಬಿಡುವುದಿಲ್ಲ. ಅವರು ಸೇನೆಗೆ ಸೇರುವ ಸಂದರ್ಭ ಬ್ರೈನ್‌ ವಾಶ್‌ ಮಾಡಲಾಗಿರುತ್ತದೆ. ಇಡೀ ವಿಶ್ವದಲ್ಲೇ ಪರಮಾಣು ಯುದ್ಧ ಸಾಧ್ಯತೆಗಳು ಇರುವುದು ಭಾರತ-­ಪಾಕಿಸ್ತಾನದ ನಡುವೆ ಮಾತ್ರ. ಆದರೆ ಸ್ಯಾಟ್‌ಲೈಟ್‌ ತಂತ್ರಜ್ಞಾನದಲ್ಲಿ ಭಾರತ ಮುಂದಿದೆ. ವಿರೋಧಿ ರಾಷ್ಟ್ರಗಳನ್ನು ತಡೆಯುವುದು ಹಾಗೂ ಅವರ ಮೇಲೆ ದಾಳಿ ಮಾಡುವಷ್ಟುಶಕ್ತಿ ಭಾರತಕ್ಕಿದೆ.

ಬೆಳಂಬೆಳಗ್ಗೆ ಗುಂಡಿನ ಸದ್ದು: ಅದೊಂದು ದಿನ ಭಾನುವಾರ ಬೆಳಗ್ಗೆ 7 ಗಂಟೆಗೆ ಗುಂಡಿನ ಸದ್ದು ಜೋರಾಗಿ ಕೇಳುತ್ತಿದ್ದು, ಎರಡು ಕಿಮೀ ದೂರದಿಂದ ಪಾಕಿಸ್ತಾನದ ಸೈನಿಕರು ಗುಂಡು ಹಾರಿಸುತ್ತಿದ್ದರು. ಇದಕ್ಕೆ ಪ್ರತೀಕಾರವಾಗಿ ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡಿದ ಸಂದರ್ಭ ಅವರ ಗುಂಡಿನ ದಾಳಿ ಕಡಿಮೆಯಾಯಿತು. ಅಂದು ರಾತ್ರಿ ಗ್ರೇಡ್‌ ಪಿ ಗನ್‌ನಿಂದ ಕತ್ತಲೆಯಾಗುವಾಗ ಪಾಕ್‌ ಸೈನಿಕರ ಕಡೆಗೆ ಗುರಿ ಇಟ್ಟಿದ್ದೆವು. ಆದ್ದರಿಂದ ಈ ಕೆಲಸವನ್ನು ಅತಿ ಸೂಕ್ಷ್ಮವಾಗಿ ಮಾಡಬೇಕು. ರಾತ್ರಿ ಐದಾರು ರಾಕೆಟ್‌ಗಳನ್ನು 7 ಮೀಟರ್‌ ದೂರಕ್ಕೆ ಫೈರ್‌ ಮಾಡಿದೆವು. ಇದಾದ ನಂತರ 15 ದಿನಗಳ ಕಾಲ ಆ ಭಾಗದಲ್ಲಿ ಪಾಕಿಸ್ತಾನದ ಸೈನಿಕರ ಸದ್ದೇ ಇರಲಿಲ್ಲ.

ಇಟ್ಟಹೆಜ್ಜೆ ಹಿಂದಿಡುವುದಿಲ್ಲ: ಭಾರತೀಯ ಸೈನಿಕರು ಯಾವುದೇ ಕಾರಣಕ್ಕೂ ಇಟ್ಟಹೆಜ್ಜೆಯನ್ನು ಹಿಂದಿಡುವುದಿಲ್ಲ. ಯಾವುದೇ ಹಿಂಜರಿಕೆ ಇಲ್ಲದೇ ಎದುರಾಳಿಗಳನ್ನು ಸದೆಬಡಿಯುವುದು ಅವರ ಗುರಿಯಾಗಿದೆ. ಇದರಿಂದ ನಾನು ಅಧಿಕಾರಿಯಾಗಿ­ದ್ದುಕೊಂಡು ಸೈನಿಕರಿಗೆ ಗೌರವ ಕೊಡುತ್ತೇನೆ. ಯಾರನ್ನೂ ಕೀಳುಮಟ್ಟದಲ್ಲಿ ಕಾಣುವುದಿಲ್ಲ. ಈಗಲೂ ನಾನು ಸೇವೆ ಸಲ್ಲಿಸಿದ್ದ ಬ್ಯಾಟಲಿಯನ್‌ನಿಂದ ಗೆಳೆಯರು ಕರೆ ಮಾಡುತ್ತಾರೆ. ಒಂದೊಮ್ಮೆ ನನ್ನ ತಾಯಿಗೆ ಹೇಳಿದ್ದೆ. ಸೇನೆಯಲ್ಲಿರುವಾಗ ಒಂದು ಕುಟುಂಬ ಇದ್ದ ಹಾಗೆ. ಅಲ್ಲಿನ ಬಾಂಧವ್ಯ ಎಲ್ಲೂ ಸಿಗುವುದಿಲ್ಲ ಎಂದು ತಿಳಿಸಿದ್ದೆ. ನಿದ್ರೆಯಲ್ಲೂ ಸೇನೆಯಲ್ಲಿದ್ದ ಘಟನೆಗಳು ನೆನಪಿಗೆ ಬರುತ್ತದೆ.

ಅಪ್ರತಿಮ ಸೇನಾ ವೀರರ ಸಂಬಂಧಿಕ:
ಕೆ ಜಿ ಉತ್ತಯ್ಯ ಅವರು ಪ್ರಥಮ ಮಹಾ ದಂಡನಾಯಕ ಫೀಲ್ಡ್‌ ಮಾರ್ಷಲ್‌ ಕೆ ಎಂ ಕಾರ್ಯಪ್ಪ, ಹಾಗೂ ಜನರಲ್‌ ತಿಮ್ಮಯ್ಯ ಅವರ ಸಂಬಂಧಿಕರು. ಕೊಡಂದೇರ ಕುಟುಂಬದಲ್ಲಿ ಜನಿಸಿರುವ ಉತ್ತಯ್ಯ ಅವರು ಈಗ ಮಡಿಕೇರಿಯಲ್ಲಿ ವಾಸವಿದ್ದಾರೆ. ಪರಿಸರದ ಮಧ್ಯೆ ಕಾಫಿ ತೋಟಗಳನ್ನು ನೋಡಿಕೊಳ್ಳುತ್ತಿದ್ದಾರೆ. ಬ್ರಿಟಿಷರ ಅವಧಿಯಲ್ಲಿ ಉತ್ತಯ್ಯ ಅವರ ಸಂಬಂಧಿಕರಾದ ರಾವ್‌ ಬಹುದ್ದೂರ್‌ ಕುಟ್ಟಯ್ಯ ಅವರು ಅಸಿಸ್ಟೆಂಟ್‌ ಕಮಿಷನರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಉತ್ತಯ್ಯ ಅವರಿಗೆ ಪುಸ್ತಕ ಓದುವ ಹವ್ಯಾಸ ಹೆಚ್ಚಾಗಿದೆ. ಮಿಲಿಟರಿ ಇತಿಹಾಸದ ಬಗ್ಗೆ, ಪಾಕಿಸ್ತಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಾರೆ.

ದಲ್ಬೀರ್‌ ಸಿಂಗ್‌ ಅವರೊಂದಿಗೆ ಕರ್ತವ್ಯ: ಭಾರತೀಯ ಸೇನಾ ಮುಖ್ಯಸ್ಥ ದಲ್ಬೀರ್‌ ಸಿಂಗ್‌ ಸುಹಾಗ್‌ ಅವರೊಂದಿಗೆ ಕೆ ಜಿ ಉತ್ತಯ್ಯ ಅವರು ಲೆಫ್ಟಿನೆಂಟ್‌ ಆಗಿದ್ದ ಸಂದರ್ಭ ಒಟ್ಟಾಗಿ ಕೆಲಸ ಮಾಡಿದ್ದಾರೆ. ದಲ್ಬೀರ್‌ ಸಿಂಗ್‌ ಅವರು ಗೂರ್ಖ ರೆಜಿಮೆಂಟ್‌ನಲ್ಲಿದ್ದರು. ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲ್ಬೀರ್‌ ಸಿಂಗ್‌ ಅವರು ಭಾಗವಹಿಸಿದ್ದರು. ಇಬ್ಬರೂ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರು.

ಸೇನೆಯಲ್ಲಿರುವಾಗಲೇ ಫೋಟೋಗ್ರಫಿ:
ನನಗೆ ಛಾಯಾಚಿತ್ರ ಎಂದರೆ ಪ್ರಾಣ. ಅದರಲ್ಲೂ ಲ್ಯಾಂಡ್‌’ಸ್ಕೇಪ್‌ ಫೋಟೋಗ್ರಫಿ ಎಂದರೆ ಅಚ್ಚುಮೆಚ್ಚು. ಸೇನೆಯಲ್ಲಿರುವಾಗ ಅಲ್ಲಿನ ಚಿತ್ರಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದೇನೆ. ಜಮ್ಮು-ಕಾಶ್ಮಿರದಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ಗ್ರಾಮಗಳಲ್ಲಿ ಮಕ್ಕಳ ಹಾಗೂ ಅಲ್ಲಿನ ಜನರ ಛಾಯಾಚಿತ್ರಗಳು, ಪಾಕಿಸ್ತಾನದ ಸೈನಿಕರಿಗೆ ನಾವು ಗುಂಡು ಹಾರಿಸುತ್ತಿದ್ದ ಛಾಯಾಚಿತ್ರಗಳನ್ನು ಸೆರೆ ಹಿಡಿದು ಅದನ್ನು ದಾಖಲೀಕರಿಸಿದ್ದೇನೆ. ಈಗಲೂ ಒಂದೊಂದು ಚಿತ್ರಗಳಿಗೆ ಅದರ ಕಥೆಯನ್ನು ಬರೆದು ಪುಸ್ತಕದಲ್ಲಿಟ್ಟಿದ್ದೇನೆ. ಸಿಯಾಚಿನ್‌ನ ಹಿಮಪಾತ, ಬೆಟ್ಟಗುಡ್ಡಗಳ ಸಾಲುಗಳನ್ನು ಸೆರೆ ಹಿಡಿದಿದ್ದೇನೆ. ಸೇನೆಯಲ್ಲಿದ್ದ ಸಂದರ್ಭ ಹೆಲಿಕಾಪ್ಟರ್‌ ಮೇಲಿನಿಂದ ಸೆರೆ ಹಿಡಿದ ಚಿತ್ರಗಳನ್ನು ಇಂದಿಗೂ ಇಟ್ಟುಕೊಂಡಿದ್ದೇನೆ. ಅಂದು ರೋಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದೆ. ಕ್ಯಾಮೆರಾದ ರೋಲ್‌ಗಳನ್ನು ತರಿಸಿಕೊಳ್ಳಲು ಸ್ನೇಹಿತರಿಗೆ ಹೇಳುತ್ತಿದ್ದೆ. ಅದು 2-3 ತಿಂಗಳ ನಂತರ ನನ್ನ ಕೈಸೇರುತ್ತಿತ್ತು. ಹೀಗೆ ನಾನು ವೃತ್ತಿ ಸಲ್ಲಿಸಿದ ಜಾಗದಲ್ಲಿ ರೈಫಲ್‌ನೊಂದಿಗೆ ಕ್ಯಾಮೆರಾವೂ ಇರುತ್ತಿತ್ತು. ನಾವು ಜಮ್ಮುವಿನಲ್ಲಿ ನದಿ ದಾಟುವ ಚಿತ್ರಣ, ಸ್ನೇಹಿತರೊಂದಿಗೆ ಕಳೆದ ಕ್ಷಣಗಳು, ಊಟ ಮಾಡುತ್ತಿದ್ದ ಸಂದರ್ಭ, ಸೈನಿಕನಾಗಿ ಕರ್ತವ್ಯ ಮಾಡುತ್ತಿದ್ದ ಎಲ್ಲಾ ಚಿತ್ರಣಗಳನ್ನು ಸೆರೆಹಿಡಿದು ಈಗ ಪುಸ್ತಕದಲ್ಲಿ ಇಟ್ಟುಕೊಂಡಿದ್ದೇನೆ.

Comments are closed.