ಬೆಂಗಳೂರು: ‘ಟೈಮ್ಸ್ ನೌ’ ಇಂಗ್ಲಿಷ್ ಸುದ್ದಿ ವಾಹಿನಿಯ ಜನಪ್ರಿಯ ನಿರೂಪಕ ಮತ್ತು ಪತ್ರಕರ್ತ ಆರ್ನಬ್ ಗೋಸ್ವಾಮಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಂದು ‘ನ್ಯೂಸ್ ಮಿನಿಟ್’ ಜಾಲ ತಾಣ ವರದಿ ಮಾಡಿದೆ.
‘ಸಂಪಾದಕೀಯ ಸಭೆಯಲ್ಲಿ ಅವರು ತಮ್ಮ ನಿರ್ಧಾರವನ್ನು ಬಹಿರಂಗ ಪಡಿಸಿದರು ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ, ಇದನ್ನು ‘ಟೈಮ್ಸ್ ನೌ’ ವಾಹಿನಿಯ ಮೂಲಗಳೂ ದೃಢಪಡಿಸಿವೆ’ ಎಂದು ವರದಿ ಹೇಳಿದೆ. ಆರ್ನಬ್ ಗೋಸ್ವಾಮಿ ಟೈಮ್ಸ್ ನೌ ಮತ್ತು ಇಟಿ ನೌ ವಾಹಿನಿಗಳ ಅಧ್ಯಕ್ಷ ಮತ್ತು ಪ್ರಧಾನ ಸಂಪಾದಕ ಹುದ್ದೆಯಲ್ಲಿದ್ದರು.
2006ರಲ್ಲಿ ಆರಂಭಗೊಂಡ ಟೈಮ್ಸ್ ನೌ ವಾಹಿನಿಯನ್ನು ಒಂದು ವರ್ಷದೊಳಗೆ ನಂಬರ್ ಒನ್ ಸ್ಥಾನಕ್ಕೆ ತಲುಪಿಸಿದ ಖ್ಯಾತಿ ಆರ್ನಬ್ ಅವರದ್ದಾಗಿದೆ. ನಿತ್ಯ ರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗುವ ‘ನ್ಯೂಸ್ ಅವರ್’ ಕಾರ್ಯಕ್ರಮದ ನಿರೂಪಣಾ ಶೈಲಿ ‘ಆರ್ನಬ್ ಶೈಲಿ’ಯೆಂದೇ ಹೆಸರಾಗಿದೆ.
ಅವರ ಸಂದರ್ಶಾನಾಧಾರಿತ ಕಾರ್ಯಕ್ರಮ ‘ಫ್ರಾಂಕ್ಲಿ ಸ್ಪೀಕಿಂಗ್ ವಿತ್ ಆರ್ನಬ್’ ಕೂಡಾ ಭಾರತೀಯ ಇಂಗ್ಲಿಷ್ ವಾಹಿನಿಗಳಲ್ಲಿ ಪ್ರಸಾರವಾಗುವ ಸಂದರ್ಶಾನಾಧಾರಿತ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಜನಪ್ರಿಯ. ಮಧ್ಯಮ ವರ್ಗದ ಪೂರ್ವಗ್ರಹಗಳು ಮತ್ತು ಆಕ್ರೋಶಗಳನ್ನು ತಮ್ಮ ಜನಪ್ರಿಯತೆಯ ಮೆಟ್ಟಿಲುಗಳನ್ನಾಗಿಸಿಕೊಂಡ ಆರ್ನಬ್ ಅವರ ಶೈಲಿ ಸಾಕಷ್ಟು ತಮಾಷೆಗಳಿಗೂ ವಸ್ತುವಾಗಿದೆ.
ರಾಜೀನಾಮೆ ನಿರ್ಧಾರ ಪ್ರಕಟಿಸಿದ ಸಂಪಾದಕೀಯ ಸಭೆಯಲ್ಲಿ ಅವರು ಹೇಳಿರುವ ಮಾತುಗಳನ್ನು ನೋಡಿದರೆ ಹೊಸತೊಂದು ಟಿ.ವಿ.ವಾಹಿನಿಯೊಂದನ್ನು ಹುಟ್ಟು ಹಾಕುವ ಸಾಧ್ಯತೆಗಳು ಕಾಣಿಸುತ್ತಿವೆ ಎಂದು ಮಾಧ್ಯಮ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.