ಕರ್ನಾಟಕ

ಕಾರು ಅಡ್ಡಗಟ್ಟಿ 5 ಲಕ್ಷ ರೂ. ದರೋಡೆ

Pinterest LinkedIn Tumblr

Crime-1ಬೆಂಗಳೂರು, ನ. ೧ – ಆದೀಶ್ವರ್ ಮಾರ್ಕೆಟಿಂಗ್ ಕಂಪನಿಯ ಶಾಖೆಗಳಿಂದ ಹಣ ಸಂಗ್ರಹ ಮಾಡಿಕೊಂಡು ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ಚಾಲಕನ ಮುಖಕ್ಕೆ ಕಾರದಪುಡಿ ಎರಚಿ ಸಹಾಯಕನಿಗೆ ಚಾಕು ತೋರಿಸಿ ಬೆದರಿಸಿ 5.5 ಲಕ್ಷ ನಗದು ದೋಚಿ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ಮುನೇಕೊಳಲುವಿನಲ್ಲಿ ನಿನ್ನೆ ರಾತ್ರಿ ನಡೆದಿದೆ.
ಆದೇಶ್ವರ್ ಮಾರ್ಕೆಟಿಂಗ್ ಕಂಪನಿಯಲ್ಲಿ ಚಾಲಕನಾಗಿದ್ದ ಲೋಕೇಶ್ ಅವರು ರಾತ್ರಿ 10.30ರ ವೇಳೆ ಕಂಪನಿಯ ನಾಲ್ಕೈದು ಶಾಖೆಗಳಿಂದ ಹಣ ಸಂಗ್ರಹಿಸಿಕೊಂಡು ಸಹಾಯಕ ಫಯಾಜ್ ಜತೆ ಮಾರುತಿ ಓಮ್ನಿ ಕಾರಿನಲ್ಲಿ ಮುನೇಕೊಳಲುವಿನ ಅಯ್ಯಪ್ಪ ಲೇಔಟ್‌ನ ಚರ್ಚ್‌ ಬಳಿ ಹೋಗುತ್ತಿದ್ದರು.
ಈ ವೇಳೆ ಎರಡು ಬೈಕ್‌ಗಳಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಏಕಾಏಕಿ ಚಾಲಕನ ಮುಖಕ್ಕೆ ಕಾರದಪುಡಿ ಎರಚಿ ಜತೆಯಲ್ಲಿದ್ದ ಫಯಾಜ್‌ಗೆ ಚಾಕು ತೋರಿಸಿ ಬೆದರಿಸಿ 5.5 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿರುವ ಎಚ್‌ಎಎಲ್ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
ಮನೆಕಳವು
ರಾಜಗೋಪಾಲನಗರದ ಮೊದಲನೇ ಮುಖ್ಯ ರಸ್ತೆಯ ಮೊದಲನೇ ಕ್ರಾಸ್‌ನ ಮನೆಯಲ್ಲಿ ಒಂಟಿಯಾಗಿದ್ದ ರಾಮಯ್ಯ ಅವರ ಮನೆಗೆ ನಿನ್ನೆ ರಾತ್ರಿ ನುಗ್ಗಿರುವ ದುಷ್ಕರ್ಮಿಗಳು 1.5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ರಾಮಯ್ಯ (76) ಅವರ ಕುಟುಂಬದವರೆಲ್ಲ ಸಂಬಂಧಿಕರ ಮನೆಗೆ ದೀಪಾವಳಿ ಆಚರಣೆಗಾಗಿ ಹೋಗಿದ್ದು, ಒಂಟಿಯಾಗಿದ್ದ ರಾಮಯ್ಯ ಅವರು ರಾತ್ರಿ 10ರ ವೇಳೆ ಟಿವಿ ನೋಡುತ್ತ ಕುಳಿತಿದ್ದಾಗ ಅವರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಬೀರುವಿನಲ್ಲಿದ್ದ 55 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿರುವ ರಾಜಗೋಪಾಲನಗರ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

Comments are closed.