ಕರ್ನಾಟಕ

ಭೂಕಬಳಿಕೆ ಆರೋಪ: ದೇವೇಗೌಡ ನಿರಾಕರಣೆ

Pinterest LinkedIn Tumblr

devegoudaಬೆಂಗಳೂರು, ನ. ೧ – ರಾಮನಗರ ತಾಲೂಕಿನ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ದೇವೇಗೌಡರ ಕುಟುಂಬ 200 ಎಕರೆ ಬಡ‌ ಜನರ ಜಮೀನು ಕಬಳಿಕೆ ಮಾಡಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ್ ಮಾಡಿದ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಪ್ರಧಾನಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಅಲ್ಲಿರುವುದು 70 ರಿಂದ 80 ಎಕರೆಯಷ್ಟೆ, 200 ಎಕರೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಕೆಲವರು ಷಢ್ಯಂತ್ರ ನಡೆಸುತ್ತಿದ್ದಾರೆ ಅದು ಎಂದಿಗೂ ಸಾಧ್ಯವಾಗುವುದಿಲ್ಲ. ಕೇತಗಾನಹಳ್ಳಿಯ ಜಮೀನು ಕಬಳಿಕೆಯ ಆರೋಪ ಸಂಬಂಧ ಈಗಾಗಲೇ ಲೋಕಾಯುಕ್ತ ಹಾಗೂ ಸಿಐಡಿ ತನಿಖೆ ನಡೆದಿದೆ. ಯಾವುದರಿಂದಲೂ ಕಬಳಿಕೆಯ ಆರೋಪ ಸಾಬೀತಾಗಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಮ್ಮ ಕುಟುಂಬ ರಾಜಕೀಯದ ಹಿನ್ನೆಲೆಯಿಂದ ಬಂದಿಲ್ಲ. ಸಾಮಾನ್ಯ ರೈತನ ಕುಟುಂಬದಿಂದ ಬಂದವರು ನಾವು. ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಅವರಿಗೆ ಸೇರಿದ 70 ರಿಂದ 80 ಎಕರೆ ಜಮೀನಿದೆ. ಆದರೆ ಕೆಲವರು 110 ಎಕರೆ ಗೋಮಾಳ ಸೇರಿದಂತೆ 200 ಎಕರೆ ಜಮೀನು ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಹೇಳಿದರು.
ಕೇತಗಾನಹಳ್ಳಿಯ ಭೂಕಬಳಿಕೆ ಆರೋಪ ಕೇಳಿಬಂದಾಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತನಿಖೆ ನಡೆದಿದೆ. ನಮ್ಮ ಕುಟುಂಬವನ್ನು ರಾಜಕೀಯವಾಗಿ ತುಳಿಯುವ ಕೆಲಸ ನಡೆಯುತ್ತಿದೆ ಎಂದು ಹಿರೇಮಠ್ ಆರೋಪಕ್ಕೆ ತಿರುಗೇಟು ನೀಡಿದರು.
ಒಕ್ಕಲಿಗರ ಸಂಘದಲ್ಲಿ ಎಲ್ಲವೂ ಸರಿಯಿಲ್ಲ. ಅಧ್ಯಕ್ಷರು, ಪದಾಧಿಕಾರಿಗಳು ಸಮಸ್ಯೆಯನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿದೆ ಮಾರಿಹಬ್ಬ ಎನ್ನುವ ರೀತಿಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ವ್ಯಂಗ್ಯದ ರೀತಿಯಲ್ಲಿ ಉತ್ತರ ನೀಡಿದ ದೇವೇಗೌಡರು, ನನ್ನದೇನಿದ್ದರೂ ರಾಜಕಾರಣ ಮಾಡುವ ಕೆಲಸ, ಸಂಘ ನೋಡಿಕೊಳ್ಳುವ ಕೆಲಸವಲ್ಲ. ಒಕ್ಕಲಿಗರ ಸಂಘ ನೋಡಿಕೊಳ್ಳಲು ಅದಕ್ಕೇ ಆದ ಅಧ್ಯಕ್ಷರಿದ್ದಾರೆ. ಅವರು ಸಮಸ್ಯೆಯನ್ನು ಸರಿಪಡಿಸುತ್ತಾರೆ. ಒಕ್ಕಲಿಗರ ಸಂಘಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಒಕ್ಕಲಿಗರ ಸಂಘದಲ್ಲಿ ಎಲ್ಲವೂ ಸರಿಯಲ್ಲ ಎನ್ನುವ ಹೇಳಿಕೆಯ ಬಗ್ಗೆ ದೇವೇಗೌಡರು ಗರಂ ಆಗಿದ್ದು, ಸಂಘವಿದೆ. ಒಕ್ಕಲಿಗರ ಸಂಘದಲ್ಲಿ ಏನೇ ಸಮಸ್ಯೆ ಇದ್ದರೂ ಸಂಘ ಸರಿಪಡಿಸಿಕೊಳ್ಳಲಿದೆ ಎಂದರು.
ಸಂಕ್ರಾಂತಿ ಬಳಿಕ ಜೆಡಿಎಸ್‌ನ ನೂತನ ಕಚೇರಿಯನ್ನು ಉದ್ಘಾಟಿಸಲಾಗುವುದು ಎಂದ ಅವರು, ಜೆಡಿಎಸ್ ಪಕ್ಷ ಪ್ರಾದೇಶಿಕ ಪಕ್ಷ, ಇದನ್ನು ಉಳಿಸಲು ರಾಜ್ಯಾದ್ಯಂತ ಸಂಘಟನೆ ಮಾಡಲಾಗುವುದು. ಪಕ್ಷದ ಕೋರ್ ಕಮಿಟಿಗೆ ಪುನಶ್ಚೇತನ ನೀಡಲಾಗುವುದು, ವಿದೇಶ ಪ್ರವಾಸದಲ್ಲಿರುವ ಕುಮಾರಸ್ವಾಮಿ ಮರಳಿ ಬಂದ ನಂತರ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀ‌ಡಲಾಗುವುದು ಎಂದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಪಕ್ಷದ ಬಲವರ್ಧನೆಗೆ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.
ಒಡಕಿನ ಮಾತು ಬೇಡ
ರಾಜ್ಯೋತ್ಸವದ ಸಂದರ್ಭದಲ್ಲಿ ಯಾರೇ ಆದರೂ ಕೂಡ ಒಡಕಿನ ಬಗ್ಗೆ ಮಾತನಾಡಬಾರದು, ಎಲ್ಲರೂ ಒಗ್ಗಟ್ಟು ಮತ್ತು ಏಕತೆಯನ್ನು ಪ್ರದರ್ಶಿಸಬೇಕು ಎಂದು ಹೇಳಿದರು.
ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಹಿರಿಯ ರಾಜಕಾರಣಿ, ಅವರು ಬಿಜೆಪಿ ಸೇರುತ್ತಾರೆ ಎನ್ನುವ ಬಗ್ಗೆ ತಮಗೆ ಏನೂ ಗೊತ್ತಿಲ್ಲ. ಬಿಜೆಪಿಗೆ ಹೋಗಿದ್ದ ಬಂಗಾರಪ್ಪ, ರಾಜಶೇಖರ್ ಮೂರ್ತಿ ಸೇರಿದಂತೆ ಹಲವಾರು ನಾಯಕರ ಗತಿ ಏನಾಗಿದೆ ಎನ್ನುವುದೂ ತಮಗೆ ಗೊತ್ತಿದೆ. ನಂಜನಗೂಡಿನ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರವಾಗಿ ಅವರು ನಿಂತರೆ ಅವರನ್ನು ಪಕ್ಷ ಬೆಂಬಲಿಸಲಿದೆ ಎಂದು ಹೇಳಿದರು.

Comments are closed.