ನವದೆಹಲಿ: ವಿವಾದಿತ ಹೇಳಿಕೆಯಿಂದಲೇ ಸುದ್ದಿಯಾಗುತ್ತಿದ್ದ ಇಸ್ಲಾಂ ಧರ್ಮ ಪ್ರಚಾರಕ ಜಕೀರ್ ನಾಯಕ್ ಅವರ ಎನ್‍ಜಿಒ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (ಐಆರ್‍ಎಫ್) ಶೀಘ್ರದಲ್ಲೇ ನಿಷೇಧಕ್ಕೊಳಗಾಗಲಿದೆ. ಉಗ್ರ ನಿಗ್ರಹ ಕಾಯ್ದೆಯಡಿಯಲ್ಲಿ ಐಆರ್‍ಎಫ್‍ಗೆ ನಿಷೇಧ ಹೇರಲು ಈಗಾಗಲೇ ಕೇಂದ್ರ ಗೃಹ ಸಚಿವಾಲಯ ತಯಾರಿ ನಡೆಸಿದೆ.
ಕಾನೂನು ವಿರುದ್ಧ ಚಟುವಟಿಕೆ ನಿಯಂತ್ರಣ ಕಾಯ್ದೆ ಪ್ರಕಾರ ಐಆರ್‍ಎಫ್‍ನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗುವುದು.
ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತದೆ ಎಂದು ಆರೋಪವಿರುವ ಪೀಸ್ ಟಿ.ವಿ ಜತೆ ಪ್ರಸ್ತುತ ಸಂಘಟನೆ ನಂಟು ಇರಿಸಿದೆ ಎಂದು ಗೃಹ ಸಚಿವಾಲಯ ನಡೆಸಿದ ತನಿಖೆಯಿಂದ ತಿಳಿದು ಬಂದಿರುವುದಾಗಿ ಬಲ್ಲಮೂಲಗಳು ಹೇಳಿವೆ.
ಜಕೀರ್ ನಾಯಕ್ ಅವರು ಪ್ರಚೋದನಾಕಾರಿ ಭಾಷಣಗಳನ್ನು ಮಾಡುವ ಮೂಲಕ ಭಯೋತ್ಪಾದನೆಗೆ ಪ್ರೇರೇಪಿಸುತ್ತಾರೆ ಎಂದು ಮಹಾರಾಷ್ಟ್ರ ಪೊಲೀಸರು ನಾಯಕ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಅಷ್ಟೇ ಅಲ್ಲದೆ ನಾಯಕ್ ಅವರು ಪೀಸ್ ಟೀವಿಯಲ್ಲಿ ಕಾರ್ಯಕ್ರಮ ನೀಡುವುದಕ್ಕಾಗಿ ವಿದೇಶದಿಂದ ಹಣ ಪಡೆದಿದ್ದರು.
ಪೀಸ್ ಟಿ.ವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಭಾರತದಲ್ಲಿ ತಯಾರಿಸಿದ್ದು, ಪ್ರಚೋದನಾಕಾರಿ ಭಾಷಣಗಳನ್ನು ಇದರಲ್ಲಿ ಪ್ರಸಾರ ಮಾಡಲಾಗಿದೆ. ಜಕೀರ್ ನಾಯಕ್ ಅವರು ತಮ್ಮ ಭಾಷಣದಲ್ಲಿ ಮುಸ್ಲಿಮರು ಭಯೋತ್ಪಾದಕರಾಗಬೇಕೆಂದು ಪೀಸ್ ಟಿ.ವಿ ಮೂಲಕ ಕರೆ ನೀಡಿದ್ದರು.
ಈ ಎಲ್ಲ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡು ಐಆರ್‌ಎಫ್‍ಗೆ ನಿಷೇಧ ಹೇರಲು ಗೃಹ ಸಚಿವಾಲಯ ತೀರ್ಮಾನಿಸಿದೆ.