ರಾಷ್ಟ್ರೀಯ

ದೀರ್ಘ ದೂರದವರೆಗೆ ನಿಲುಗಡೆರಹಿತ ವಿಮಾನ ಹಾರಾಟ ಮಾಡಿ ವಿಶ್ವ ದಾಖಲೆ ಮಾಡಿದ ಏರ್ ಇಂಡಿಯಾ

Pinterest LinkedIn Tumblr

air-india

ನವದೆಹಲಿ: ದೆಹಲಿ-ಸ್ಯಾನ್ ಫ್ರಾನ್ಸಿಸ್ಕೋ ಮಧ್ಯೆ 15,300 ಕಿ.ಮೀ. ದೂರ ನಿಲುಗಡೆ ರಹಿತ ವಿಮಾನ ಹಾರಾಟ ನಡೆಸುವ ಮೂಲಕ ಏರ್ ಇಂಡಿಯಾ ವಿಶ್ವದಾಖಲೆ ನಿರ್ಮಿಸಿದೆ. ಈ ದೂರವನ್ನು ಏರ್ ಇಂಡಿಯಾ ವಿಮಾನ 14.5 ಗಂಟೆಯಲ್ಲಿ ಕ್ರಮಿಸಿದೆ.

ಈ ಮೂಲಕ ಏರ್ ಇಂಡಿಯಾ ಎಮಿರೇಟ್ಸ್ ಸಂಸ್ಥೆಯ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಏರ್ ಇಂಡಿಯಾ ತನ್ನ ಹೆಸರಿಗೆ ಬರೆಸಿಕೊಂಡಿದೆ. ಎಮಿರೇಟ್ಸ್ ಸಂಸ್ಥೆ ದುಬೈನಿಂದ ಆಕ್ಲೆಂಡ್ಗೆ 14,120 ಕಿ.ಮೀ. ದೂರ ನಿಲುಗಡೆ ರಹಿತ ಹಾರಾಟ ನಡೆಸುತ್ತದೆ. ಈ ಮುನ್ನ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಏರ್ ಇಂಡಿಯಾ ಅಟ್ಲಾಂಟಿಕ್ ಸಾಗರ ಮೇಲ್ಭಾಗದಿಂದ ವಿಮಾನ ಹಾರಾಟ ನಡೆಸುತ್ತಿತ್ತು. ಈ ಮಾರ್ಗ 13,900 ಕಿ.ಮೀ. ದೂರ ಇದ್ದು, ವಿಶ್ವದ ಎರಡನೇ ಅತಿ ದೂರದ ನಿಲುಗಡೆ ರಹಿತ ಮಾರ್ಗ ಎಂಬ ಹೆಗ್ಗಳಿಕೆ ಪಡೆದಿತ್ತು. ಇದಕ್ಕೆ ಬದಲಾಗಿ ಏರ್ ಇಂಡಿಯಾ ಫೆಸಿಫಿಕ್ ಸಾಗರದ ಮೇಲ್ಭಾಗದಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ವಿಮಾನ ಹಾರಾಟ ನಡೆಸಿದೆ.

ಹೊಸ ಮಾರ್ಗ 1400 ಕಿ.ಮೀ. ಹೆಚ್ಚು ದೂರ ಹೊಂದಿದ್ದರೂ ಸಹ ಸುಮಾರು 2 ಗಂಟೆ ಕಡಿಮೆ ಅವಧಿಯಲ್ಲಿ ಗುರಿ ತಲುಪಿದೆ. ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದರಿಂದ ಗಾಳಿ ಸಹ ಅದೇ ದಿಕ್ಕಿನಲ್ಲಿ ಬೀಸುತ್ತದೆ. ಇದರಿಂದ ಪಶ್ಚಿಮದಿಂದ ಪೂರ್ವಕ್ಕೆ ಸಾಗುವ ಮಾರ್ಗದಲ್ಲಿ ಗಾಳಿಯ ಘರ್ಷಣೆ ಕಡಿಮೆ ಇರುತ್ತದೆ. ಹಾಗಾಗಿ ವೇಗವಾಗಿ ಸಾಗಲು ಅನುಕೂಲವಾಗುತ್ತದೆ. ಜತೆಗೆ ಇಂಧನ ಬಳಕೆ ಪ್ರಮಾಣ ಸಹ ಕಡಿಮೆಯಾಗಲಿದೆ ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಏರ್ ಇಂಡಿಯಾ ನಿರ್ಮಿಸಿರುವ ಈ ದಾಖಲೆ ಸುಮಾರು 2 ವರ್ಷಗಳ ಕಾಲ ಇರಲಿದೆ. ಸಿಂಗಾಪುರ ಏರ್ಲೈನ್ಸ್ ವಿಶ್ವದ ಅತ್ಯಂತ ದೂರದ ನಿಲುಗಡೆ ರಹಿತ ಮಾರ್ಗದಲ್ಲಿ ವಿಮಾನ ಹಾರಾಟ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಸಿಂಗಾಪುರದಿಂದ ನ್ಯೂಯಾರ್ಕ್ ನಡುವೆ 16,500 ಕಿ.ಮೀ. ದೂರ ವಿಮಾನ ಹಾರಾಟ ನಡೆಸಲಾಗುವುದು.

Comments are closed.