ರಾಷ್ಟ್ರೀಯ

ಮತ್ತೊಂದು ಬೊಫೋರ್ಸ್ ಹಗರಣ

Pinterest LinkedIn Tumblr

boನವದೆಹಲಿ, ಅ. ೨೧ – ಸಿಬಿಐ 2008ರ ಮೂರು ವಿಮಾನಗಳ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ರೆಜಿಲ್‌ನ ಎಂಬ್ರಾರ್ ಸಂಸ್ಥೆಯಿಂದ 57 ಲಕ್ಷ ಡಾಲರ್ ಲಂಚ ಪಡೆದ ಬ್ರಿಟನ್ ಮೂಲದ ಅನಿವಾಸಿ ಭಾರತೀಯ ಶಸ್ತ್ರಾಸ್ತ್ರ ಮಾರಾಟಗಾರರೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಇದೇ ವ್ಯಕ್ತಿಯ ಹೆಸರು ಸಿಬಿಐ ನಡೆಸುತ್ತಿರುವ ಇನ್ನೊಂದು ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ವ್ಯವಹಾರದಲ್ಲೂ ತಳುಕು ಹಾಕಿಕೊಂಡಿದೆ.
ಈ ಮಧ್ಯವರ್ತಿಯ ಒಡೆತನದ ಸಿಂಗಾಪುರದ ಕಂಪನಿಯ ಮೂಲಕ ಎಂಬ್ರಾರ್ ಸಂಸ್ಥೆಯ ಉಪ ಘಟಕಗಳು 2009 ರಲ್ಲಿ ಲಂಚದ ಹಣ ಸಂದಾಯ ಮಾಡಿದ್ದವು ಎಂದು ಸಿಬಿಐ ಮೂಲಗಳು ತಿಳಿಸಿವೆ.
ಆಸ್ಟ್ರಿಯಾ ಮತ್ತು ಸ್ವಿಜರ್ಲೆಂಡ್‌ ಮಾರ್ಗವಾಗಿ ಲಂಚ ಹರಿದು ಬಂದಿದೆ ಎನ್ನಲಾಗಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಾಥಮಿಕ ತನಿಖೆ ಆರಂಭಿಸಿದ ಸಿಬಿಐಗೆ ಸಾಕಷ್ಟು ಪ್ರಥಮ ಮಾಹಿತಿ ಸಾಕ್ಷ್ಯಾಧಾರಗಳು ದೊರೆತ ನಂತರ ತನಿಖೆಯ ವಿವರಗಳನ್ನೇ ಎಫ್‌ಐಆರ್ ಆಗಿ ಪರಿವರ್ತಿಸಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಬಳಕೆಗಾಗಿ ಮೂರು ವಿಮಾನಗಳನ್ನು 2008 ರಲ್ಲಿ ಖರೀದಿಸಲು ಎಂಬ್ರಾರ್ ಜತೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಭಾರತ ಮತ್ತು ಸೌದಿ ಅರೇಬಿಯಾ ಜತೆ ವ್ಯವಹರಿಸಲು ಎಂಬ್ರಾರ್ ಸಂಸ್ಥೆ ಮಧ್ಯವರ್ತಿಗಳ ಸೇವೆಗಳನ್ನು ಬಳಸಿದೆ ಎಂದು ಬ್ರೆಜಿಲ್‌ನ ಸುದ್ದಿ ಪತ್ರಿಕೆಯೊಂದು ವರದಿ ಮಾಡಿತ್ತು.
ಭಾರತದ ರಕ್ಷಣಾ ಇಲಾಖೆ ಖರೀದಿ ನಿಯಮಗಳ ಪ್ರಕಾರ ವ್ಯವಹಾರ ಕುದುರಿಸಲು ಯಾವೊಬ್ಬ ಮಧ್ಯವರ್ಥಿಯನ್ನೂ ಬಳಸಬಾರದೆಂಬ ನಿಯಮವಿದೆ.
ಭಾರತದ ಜತೆ ವ್ಯವಹಾರವನ್ನು ಅಂತಿಮಗೊಳಿಸಲು ಬ್ರಿಟನ್ ಮೂಲದ ರಕ್ಷಣಾ ಏಜೆಂಟ್ ಒಬ್ಬರಿಗೆ ಕಮಿಷನ್ ನೀಡಲಾಗಿದೆ ಎಂದು ಬ್ರೆಜಿಲ್‌ನ ಪ್ರಮುಖ ಪತ್ರಿಕೆಯಾದ ಫೋಲ್ಹಾ-ಡಿ-ಸಾವೊ ಪಾಲೊ ವರದಿ ಮಾಡಿತ್ತು.
ಭಾರತದ ವಾಯು ಪಡೆಯ ವೈಮಾನಿಕ ಱ್ಯಾಡಾರ್ (ಎಡಬ್ಲ್ಯೂಎಸಿ) ವ್ಯವಸ್ಥೆಗಾಗಿ 2008 ರಲ್ಲಿ ಡಿಆರ್‌ಡಿಒ ಮೂರು ವಿಮಾನಗಳನ್ನು ಎಂಬ್ರಾರ್ ಸಂಸ್ಥೆಯಿಂದ ಖರೀದಿಸಿತ್ತು.

Comments are closed.