ಕರ್ನಾಟಕ

ಭ್ರಷ್ಟಾಚಾರ ತೊಲಗಿಸಲು ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ

Pinterest LinkedIn Tumblr

braಬೆಂಗಳೂರು, ಅ. ೨೧- ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರವನ್ನು ಕೊನೆಗೊಳಿಸಬೇಕೆಂದು ಆಗ್ರಹಪಡಿಸಿ ನಗರದಲ್ಲಿಂದು ಭ್ರಷ್ಟಾಚಾರ ಜಾಗೃತಿ ಅಭಿಯಾನದ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಅಮ್ ಅದ್ಮಿ ಪಾರ್ಟಿ ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ ಸಮೃದ್ಧ ಸಮಾಜವನ್ನು ಕಟ್ಟಬೇಕೆಂದು ಯುವಜನತೆಯಲ್ಲಿ ಪ್ರತಿಭಟನೆಯ ಮೂಲಕ ಮನವಿ ಮಾಡಿದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಶಿವರಾಮೇಗೌಡ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಕಾರ್ಯಕರ್ತರು ಸರ್ಕಾರದ ಭ್ರಷ್ಟಾಚಾರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ಭ್ರಷ್ಟಾಚಾರ ಜಾಲವನ್ನು ಮುರಿದು ಹಾಕಿ ಭ್ರಷ್ಟಾಚಾರ ಅಳಿಸಿ ದೇಶ ಉಳಿಸಿ, ಲಂಚ ಕೊಡಲು ನಿರಾಕರಿಸಿ, ಪಾರದರ್ಶಕತೆ ತನ್ನಿ, ಭ್ರಷ್ಟಾಚಾರ ತಡೆಯಿರಿ ಎಂಬ ಘೋಷಣೆಗಳನ್ನು ಕೂಗಿದರು.
ಆನಂದರಾವ್ ವೃತ್ತದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂತೋಷ್ ಹೆಗಡೆ, ಎಚ್.ಎಸ್. ದೊರೆಸ್ವಾಮಿ, ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸಿ ಪ್ರಾಮಾಣಿಕ ಲೋಕಾಯುಕ್ತರನ್ನು ನೇಮಕ ಮಾಡಬೇಕೆಂದು ಸರ್ಕಾರವನ್ನು ಆಗ್ರಹಪಡಿಸಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಧ್ಯಕ್ಷರ ಹುದ್ದೆ ಖಾಲಿ ಉಳಿದಿದೆ. ಕೂಡಲೇ ದಕ್ಷ, ಪ್ರಾಮಾಣಿಕ ಅಧ್ಯಕ್ಷರೊಬ್ಬರನ್ನು ನೇಮಕ ಮಾ‌ಡಬೇಕೆಂದು ಒತ್ತಾಯಿಸಿದರು.
ಅಧಿಕಾರಿಗಳು ತಮ್ಮ ಕುಟುಂಬದ ಆಸ್ತಿಗಳನ್ನು ಕಡ್ಡಾಯವಾಗಿ ಘೋಷಿಸಬೇಕು. ಸಿ ವರ್ಗದವರೆಗಿನ ಎಲ್ಲ ವರ್ಗಾವಣೆಗಳನ್ನು ಪಾರದರ್ಶಕವಾಗಿ ಕೌನ್ಸಿಲಿಂಗ್ ಮೂಲಕವೇ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ನಾಪತ್ತೆಯಾಗಿರುವ ಕ‌ಡತಗಳನ್ನು ಪತ್ತೆ ಹಚ್ಚಿ ಸಂಬಂಧಪಟ್ಟ ಅಧಿಕಾರಿ ಮತ್ತು ನೌಕರರನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

Comments are closed.