
ನವದೆಹಲಿ: ‘ಖೂನ್ ಕಿ ದಲಾಲಿ’ ಪದ ಬಳಸುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಎಲ್ಲ ಮಿತಿಗಳನ್ನೂ ಮೀರಿದ್ದಾರೆ, ಅವರ ಪದಗಳು ಸೇನೆಯ ಶೌರ್ಯಕ್ಕೆ ಮಾಡಿದ ಅಪಮಾನ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಶುಕ್ರವಾರ ಹೇಳಿದರು.
‘ದಲಾಲಿ ಪದವನ್ನು ಭಾರತೀಯ ಸೇನೆಗೆ ಸಂಬಂಧಿಸಿದಂತೆ ಮತ್ತು ರಾಷ್ಟ್ರವನ್ನು ಸಂರಕ್ಷಿಸುವ ಅವರ ಯತ್ನಗಳಿಗೆ ಸಂಬಂಧಿಸಿದಂತೆ ಪದವನ್ನು ಬಳಸಿದ್ದಾರಾ ಎಂಬುದಾಗಿ ನಾನು ರಾಹುಲ್ ಗಾಂಧಿಯವರನ್ನು ಕೇಳಬಯಸುತ್ತೇನೆ’ ಎಂದು ಅವರು ನುಡಿದರು. ‘ಕೇಜ್ರಿವಾಲ್ ಜಿ ಅವರು ಸೀಮಿತ ದಾಳಿ ಬಗ್ಗೆ ಹೇಳಿಕೆ ನೀಡಿದ ತತ್ ಕ್ಷಣವೇ ಪಾಕಿಸ್ತಾನದಲ್ಲಿ ಅದು ದೊಡ್ಡ ಸುದ್ದಿಯಾಯಿತು. ಆ ಬಳಿಕ ಈಗ ರಾಹುಲ್ ಜಿ ಅವರು ‘ದಲಾಲಿ’ ಪದ ಪ್ರಸ್ತಾಪಿಸಿದ್ದಾರೆ’ ಎಂದು ಷಾ ಹೇಳಿದರು.
”ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನ್ನು ಕೆಲವು ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ನಾವು ಆರಂಭದಿಂದಲೂ ಸೇನಾ ಕಾರ್ಯಚರಣೆಯನ್ನು ರಾಜಕೀಯದಿಂದ ದೂರವಿಡಲು ಪ್ರಯತ್ನಿಸಿದ್ದೆವು. ಆದರೆ ಈ ಪಕ್ಷಗಳ ನಾಯಕರು ಅದಕ್ಕೆ ರಾಜಕೀಯ ಬಣ್ಣ ಬೆರೆಸಿ ಸೈನಿಕರಿಗೆ ನಾಚಿಗೆಯನ್ನುಂಟು ಮಾಡಿದ್ದಾರೆ” ಎಂದು ಹೇಳಿದರು.
ನೇರ ವಾಗ್ದಾಳಿ ನಡೆಸಿದ ಶಾ, ಪ್ರಶ್ನೆ ಮಾಡಲು ನೀವ್ಯಾರು? ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಬಗ್ಗೆ ಸಾಕ್ಷಿಗಳನ್ನು ಕೇಳುತ್ತಿರುವ ನೀವು ಸೈನಿಕರನ್ನು ಪ್ರಶ್ನಿಸುತ್ತೀರಾ ಎಂದು ಅರವಿಂದ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದರು. ಕೇಜ್ರಿವಾಲ್ ಅವರ ಹೇಳಿಕೆ ನಂತರ ಪಾಕಿಸ್ತಾನದಲ್ಲಿ ಜನಪ್ರಿಯರಾಗಿದ್ದಾರೆ. ಅವರ ಮಾತಿನಿಂದ ಯಾರಿಗೆ ಸಹಾಯವಾಯಿತು ಎಂದು ಗೊತ್ತಾಗುತ್ತದೆ ಎಂದರು.
ಮೋದಿಯವರು ಭಾರತೀಯ ಯೋಧರ ರಕ್ತದೊಂದಿಗೆ ‘ದಲ್ಲಾಳಿ’ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸುವ ಮೂಲಕ ಎಲ್ಲೆಯನ್ನು ಮೀರಿದ್ದಾರೆ ಎಂದು ಆರೋಪಿಸಿರುವ ಅಮಿತ್ ಶಾ ಯಾರು ಕಲ್ಲಿದ್ದಲಿನ ದಲ್ಲಾಳಿ ಕೆಲಸ ಮಾಡಿದ್ದಾರೆ, ಯಾರು ಬೋಫೋರ್ಸ್ ದಲ್ಲಾಳಿ ಮಾಡಿದ್ದಾರೆ ಎಂದು ಕೇಳಿದರು.
”ಸೈನಿಕರ ರಕ್ತ ಮಾರಾಟದ ಸರಕಾಗಿದೆಯೇ ಎಂದು ಕೇಳಲು ನಾನು ಬಯಸುತ್ತೇನೆ, ಇಂದು ಶೌರ್ಯದಿಂದ ಸೇನಾ ಯೋಧರು ಹೋರಾಡುತ್ತಿರುವಾಗ ರಾಹುಲ್ ಗಾಂಧಿ ಅವರನ್ನು ಪ್ರಶ್ನೆ ಮಾಡುತ್ತಾರೆ” ಎಂದು ಶಾ ಹೇಳಿದರು.
ದೇಶ ವಿರೋಧಿ ರಾಜಕಾರಣಿಗಳ ಹೇಳಿಕೆಗಳನ್ನು ನಾವು ನಂಬುವುದಿಲ್ಲ. ನಾವು ಸೈನಿಕರ ಬಂದೂಕಿನ ಮೇಲೆ ನಂಬಿಕೆಯಿಡುತ್ತೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ, ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಧನ್ಯವಾದ ಹೇಳಿದರು. ಸರ್ಜಿಕಲ್ ಸ್ಟ್ರೈಕ್ ಬಗ್ಗೆ, ಸೈನಿಕರ ತ್ಯಾಗದ ಬಗ್ಗೆ ಜನರ ಮುಂದೆ ಸುದ್ದಿಗಳನ್ನು ನೀಡುವಲ್ಲಿ ಮಾಧ್ಯಮಗಳ ವರ್ತನೆ ಪ್ರಶಂಸನೀಯವಾಗಿತ್ತು ಎಂದು ಶ್ಲಾಘಿಸಿದರು.
Comments are closed.