ಹೊಸದಿಲ್ಲಿ : ಅಧ್ಯಯನವೊಂದರ ಪ್ರಕಾರ 2015ರಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಸಾವು ಅತಿ ಹೆಚ್ಚು ಭಾರತದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಲಾನ್ಸೆಟ್ ಪ್ರಕಟಿಸಿದ “ದ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ 2015′ ಎನ್ನುವ ಅಧ್ಯಯನ ವರದಿಯಲ್ಲಿ 2015ರಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯೋಮಾನದ 10 ಲಕ್ಷ ಕ್ಕಿಂತಲೂ ಅಧಿಕ ಮಕ್ಕಳು ಭಾರತದಲ್ಲಿ ಸಾವಿಗೀಡಾಗಿದ್ದಾರೆ. ಜೊತೆಗೆ ಕ್ಷಯ ರೋಗ ನಿವಾರಣೆ ಮತ್ತು ತಾಯಿಯ ಸುರಕ್ಷೆಯ ವಿಚಾರದಲ್ಲಿ ಕೂಡಾ ಭಾರತ ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ ಎನ್ನಲಾಗಿದೆ.
ಲಾನ್ಸೆಟ್ ಜಾಗತಿಕ ಆರೋಗ್ಯದ ಕುರಿತು ಅಧ್ಯಯನ ನಡೆಸುವ ಸಂಸ್ಥೆಯಾಗಿದೆ. ಭಾರತದಲ್ಲಿ ಹೃದಯಕ್ಕೆ ಸಂಬಂಧಿಸಿದ ರೋಗದಿಂದಾಗಿ ಕೂಡಾ ಅತಿಹೆಚ್ಚು ಸಾವು ಸಂಭವಿಸಿದೆ ಎಂದು ಅಧ್ಯಯನ ತಿಳಿಸಿದೆ. ಆದರೆ ಈ ಕ್ಷೇತ್ರದಲ್ಲಿ( ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ ವಿಚಾರದಲ್ಲಿ) ಹೆಚ್ಚಿನ ರಾಷ್ಟ್ರಗಳು(ಭಾರತ, ಪಾಕಿಸ್ತಾನ, ಬಾಂಗ್ಲಾದೇಶ.ನೇಪಾಲ) ಹೆಚ್ಚಿನ ಹಾನಿಯನ್ನು ಆಗದಂತೆ ತಡೆಯಲು ನಿರೀಕ್ಷೆಗೂ ಮೀರಿ ಕೆಲಸಮಾಡಿವೆ ಎಂದು ಅಧ್ಯಯನದ ವರದಿಯಲ್ಲಿದೆ.
ಭಾರತದಲ್ಲಿಕ್ಷಯ ರೋಗ ತಡೆಯುವ ನಿಟ್ಟಿನಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಆಗಿಲ್ಲ. ಈ ಕ್ಷೇತ್ರದಲ್ಲಿ ಬಾಂಗ್ಲಾದೇಶದಲ್ಲಿಯೂ ಹೆಚ್ಚಿನ ಕೆಲಸ ಆಗಿಲ್ಲ. ಈ ಎಲ್ಲ ದೇಶಗಳಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಪ್ರಕರಣ ಹೆಚ್ಚು ದಾಖಲಾಗಿವೆ. ಇತರೆಲ್ಲ ದೇಶಗಳಿಗೆ ಹೋಲಿಸಿದರೆ ಈ ವಯೋಮಾನದ ಮಕ್ಕಳ ಸಾವಿನ ಪ್ರಕರಣ ಅತಿಹೆಚ್ಚು ಭಾರತದಲ್ಲಿಯೇ ದಾಖಲಾಗಿವೆ ಎಂದು ಅಧ್ಯಯನ ತಿಳಿಸಿದೆ.