ನವದೆಹಲಿ: ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಯಾವುದೇ ಶಂಕೆಗಳಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ದಿಗ್ವಿಜಯ್ ಸಿಂಗ್ ಅವರು, ಸೀಮಿತ ದಾಳಿ ಕುರಿತಂತೆ ಸರ್ಕಾರದ ಬೆಂಬಲಕ್ಕೆ ಕಾಂಗ್ರೆಸ್ ಎಂದಿಗೂ ಇರುತ್ತದೆ. ಆದರೆ, ಸೀಮಿತ ದಾಳಿಯನ್ನು ನಿರಾಕರಿಸಿ ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕಿದೆ ಎಂದು ಹೇಳಿದ್ದಾರೆ.
ಸೀಮಿತ ದಾಳಿ ಕುರಿತಂತೆ ನಮಗೆ ಯಾವುದೇ ರೀತಿಯ ಅಪನಂಬಿಕೆಗಳಿಲ್ಲ. ಕಾರ್ಯಾಚರಣೆ ಆರಂಭವಾದಾಗಿನಿಂದಲೂ ನಾವು ಬೆಂಬಲ ನೀಡುತ್ತಲೇ ಇದ್ದೇವೆ. ನಮ್ಮ ಭಾರತೀಯ ಸೇನೆ ಅದ್ಭುತವಾಗಿ ಕಾರ್ಯಾಚರಣೆ ನಡೆಸಿದೆ. ಭಾರತೀಯ ಸೇನೆ ಮೇಲೆ ನಮಗೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸೀಮಿತ ದಾಳಿಯೊಂದು ನಕಲಿ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಸಂಜಯ್ ನಿರುಪಮ್ ಅವರು ಸೀಮಿತ ದಾಳಿಯನ್ನು ನಕಲಿ ಎನ್ನಬಾರದಿತ್ತು. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಸೀಮಿತ ದಾಳಿ ಕುರಿತಂತೆ ಯಾವುದೇ ಶಂಕೆಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.