ನವದೆಹಲಿ: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ತುರ್ತು ಪ್ರವಾಸ ದಾಖಲೆಗಳ ಮೇಲೆ ಭಾರತಕ್ಕೆ ಬರಬಹುದು ಎಂದು ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಕೋರ್ಟ್ ಗೆ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ ಅವರಿಗೆ ವೈಯಕ್ತಿಕ ವಿಚಾರಣೆಯಿಂದ ವಿನಾಯ್ತಿ ನೀಡಬಾರದು ಎಂದು ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಮನವಿ ಮಾಡಿದ ಇಡಿಯ ಸರ್ಕಾರಿ ಅಭಿಯೋಜಕ ನವೀನ್ ಮಠ ಅವರು, ಆರೋಪಿ ಸಮೀಪದ ಭಾರತದ ಹೈಕಮಿಷನ್ ಕಚೇರಿಗೆ ಭೇಟಿ ನೀಡಿ, ತುರ್ತು ಪ್ರವಾಸ ದಾಖಲೆಗಳನ್ನು ಪಡೆದು ಭಾರತಕ್ಕೆ ಬರಬಹುದು ಎಂದರು.
ಭಾರತೀಯ ಅಧಿಕಾರಿಗಳು ನನ್ನ ಪಾಸ್ ಪೋರ್ಟ್ ಅನ್ನು ಅಮಾನತು ಮಾಡಿದ್ದರಿಂದ ನನಗೆ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಸೆ.9ರಂದು ವಿಜಯ್ ಮಲ್ಯ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ತಿಳಿಸಿದ್ದರು. ಆದರೆ ಇಡಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ವಾದ ಪ್ರತಿ ವಾದ ಆಲಿಸಿದ ಮುಖ್ಯ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಸುಮಿತ್ ದಾಸ್ ಅವರು ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ ವಿಜಯ್ ಮಲ್ಯ ಅವರಿಗೆ ಹಲವು ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ ವಿಚಾರಣೆಗೆ ಹಾಜರಾಗದ ಮಲ್ಯ ವಿರುದ್ಧ ಇಡಿ ಕೋರ್ಟ್ ಮೆಟ್ಟಿಲೇರಿದೆ.
ಮದ್ಯದ ದೊರೆ ಮಲ್ಯ ಬ್ಯಾಂಕ್ ಗಳಿಗೆ 9 ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿಸಬೇಕಾಗಿದೆ. ಮಾರ್ಚ್ ನಲ್ಲಿ ಭಾರತದಿಂದ ತಲೆಮರೆಸಿಕೊಂಡಿದ್ದ ಮಲ್ಯ ಸದ್ಯ ಲಂಡನ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಭಾರತ ಸರ್ಕಾರ ಮಲ್ಯ ಅವರ ಪಾಸ್ ಪೋರ್ಟ್ ಅನ್ನು ರದ್ದುಪಡಿಸಿದೆ. ಅಲ್ಲದೆ ಮುಂಬೈ ಕೋರ್ಟ್ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸಿದೆ.