ಷೋಕಿಗಾಗಿ ಕಾರ್, ಬೈಕ್ ಕದ್ದಿಯುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಖತರ್‌ನಾಕ್ ಕಳ್ಳನಿದ್ದಾನೆ. ವಿಶೇಷ ಎಂದರೆ ಅಮೃತ್‌ಸಿಂಗ್ ಎಂಬ ಈತ ನಿದ್ದೆ ಮಾಡುವುದಕ್ಕಾಗಿಯೇ ಎಸಿ ಕಾರ್ ಕದಿಯುತ್ತಿದ್ದ. ಎಸಿ ಕಾರು ಇಲ್ಲದಿದ್ದರೆ ಇವನಿಗೆ ನಿದ್ದೆಯೇ ಬರುವುದಿಲ್ಲ. ಇದು ಈತನ ಕಾಯಕವಾಗಿತ್ತು. ಆದರೆ, ಯಾವುದೇ ಕಾರುಗಳನ್ನು ಮನೆಯಬಳಿ ನಿಲ್ಲಿಸಿಕೊಳ್ಳುತ್ತಿರಲಿಲ್ಲ.
ರಾತ್ರಿ ವಾಹನ ಸವಾರಿ ಎಂದರೆ ಇವನಿಗೆ ಭಾರಿ ಇಷ್ಟ. ಸವಾರಿ ಬಳಿಕ ರಸ್ತೆ ಪಕ್ಕ ಕಾರನ್ನು ಪಾರ್ಕ್ ಮಾಡಿ ಅದರೊಳಗೆ ಸುಖನಿದ್ದೆ ಅನುಭವಿಸುತ್ತಿದ್ದ. ಬೋರ್ ಹೊಡೆದರೆ ಬೇರೆ ಕಾರು ಕದಿಯುತ್ತಿದ್ದ. ಕಾರ್‌ಗೆ ಪೆಟ್ರೋಲ್ ಹಾಕಿಸಲು ಬೈಕ್ ಕದಿಯುತ್ತಿದ್ದ. ಬಹಳ ದಿನಗಳಿಂದ ಈತನ ಆಟ ಹೀಗೆಯೇ ನಡೆದಿತ್ತು. ಕೊನೆಗೆ ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬಂತೆ ದಿಲ್ಲಿ ಪೊಲೀಸರು ಈತನನ್ನು ಇತ್ತೀಚಿಗೆ ಬಂಧಿಸಿದ್ದಾರೆ.