
ಪಾಕಿಸ್ತಾನ ಉಗ್ರರಿಗೆ ಸಹಕಾರ ನೀಡುತ್ತಿದೆ ಎಂದು ಭಾರತ ಬಹಿರಂಗವಾಗಿಯೇ ಹೇಳಿಕೆ ನೀಡಿ ವಿಶ್ವದ ಮುಂದೆ ಸ್ಯಾಕ್ಷ್ಯಗಳನ್ನು ತೋರಿಸುತ್ತಿದ್ದರೂ ಪಾಕ್ ಮಾತ್ರ ಎಂದಿನಂತೆ ವಿದೇಶಿ ವ್ಯಕ್ತಿಗಳಿಂದ ಈ ಕೃತ್ಯ ನಡೆಯುತ್ತಿದೆ. ನಮ್ಮ ದೇಶ ಉಗ್ರರಿಗೆ ಬೆಂಬಲ ನೀಡುತ್ತಿಲ್ಲ ಎಂದು ಮೊಂಡುವಾದವನ್ನು ಮಾಡಿಕೊಂಡೇ ಬಂದಿತ್ತು. ಆದರೆ ಇಲ್ಲಿಯವರೆಗೆ ಬಾಯಿ ಮಾತಿನಲ್ಲೇ ಪಾಕಿಸ್ತಾನಕ್ಕೆ ಉತ್ತರ ನೀಡುತ್ತಿದ್ದ ಭಾರತ ಇದೇ ಮೊದಲ ಬಾರಿಗೆ ಪಾಕ್ ಆಕ್ರಮಿತ ಕಾಶ್ಮೀರ ಒಳಗಡೆ ನುಗ್ಗಿ ದಾಳಿ ನಡೆಸಿ 38 ಉಗ್ರರನ್ನು ಹತ್ಯೆ ಮಾಡಿ ಖಡಕ್ ಉತ್ತರ ನೀಡಿದೆ. ಹೀಗಾಗಿ ಈ ಸರ್ಜಿಕಲ್ ಸ್ಟ್ರೈಕ್ ಎಂದರೇನು? ಹೇಗೆ ನಡೆಯುತ್ತದೆ ಎನ್ನುವ ಮಾಹಿತಿಯನ್ನು ನೀಡಲಾಗುತ್ತದೆ.
ಏನಿದು ಸರ್ಜಿಕಲ್ ಕಾರ್ಯಾಚರಣೆ?
ಒಂದು ನಿರ್ದಿಷ್ಟವಾದ ಗುರಿಯ ಮೇಲೆ ದಾಳಿ ನಡೆಸುವುದೇ ಸರ್ಜಿಕಲ್ ಸ್ಟ್ರೈಕ್. ಈ ದಾಳಿ ವೇಳೆ ಅಕ್ಕಪಕ್ಕದ ಪ್ರದೇಶಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತದೆ. ಇದು ಯುದ್ಧವಲ್ಲ ಆದರೆ ಮಿಂಚಿನ ವೇಗದಲ್ಲಿ ಶತ್ರು ನೆಲೆ ಮೇಲೆ ದಾಳಿ ನಡೆಸಿ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಸೇನೆ ತಮ್ಮ ನೆಲೆಯತ್ತ ವಾಪಸ್ ಬರುತ್ತದೆ.
ಪೂರ್ವ ಸಿದ್ಧತೆ ಅಗತ್ಯ:
ಈ ದಾಳಿ ಒಮ್ಮಿದೊಮ್ಮೆಗೆ ನಡೆಯುದಿಲ್ಲ. ಬಹಳಷ್ಟು ಪೂರ್ವ ಸಿದ್ಧತೆಯ ಜೊತೆ ಶತ್ರು ನೆಲೆಗಳ ಬಗ್ಗೆ ಪಕ್ಕ ಮಾಹಿತಿ ಬೇಕಾಗುತ್ತದೆ. ಹೀಗಾಗಿ ಹಲವು ದಿನಗಳಿಂದ ಚಲನವಲನಗಳನ್ನು ಸಂಗ್ರಹಿಸಲೇಬೇಕಾಗುತ್ತದೆ
ಯಾಕೆ ಸರ್ಜಿಕಲ್ ಸ್ಟ್ರೈಕ್ ನಡೆಯುತ್ತದೆ?
ಸಾಮಾನ್ಯವಾಗಿ 3 ಕಾರಣಕ್ಕೆ ದೇಶಗಳು ಸರ್ಜಿಕಲ್ ಕಾರ್ಯಾಚರಣೆ ನಡೆಸುತ್ತದೆ. ಒಂದು ದೇಶದ ಮೇಲೆ ಉಗ್ರರು ದಾಳಿ ನಡೆಸಿ ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಾಗ, ವೈರಿ ದೇಶದಲ್ಲಿ ನಮ್ಮ ದೇಶಕ್ಕೆ ಬೇಕಾಗಿರುವ ಅಪರಾಧಿ ಇದ್ದ ವೇಳೆ ಕೊನೆಯದಾಗಿ ದೇಶದ ಒಂದು ಸ್ಥಳದಲ್ಲಿದ್ದುಕೊಂಡು ಇನ್ನೊಂದು ದೇಶದ ವಿರುದ್ಧ ದಾಳಿ ನಡೆಸುವ ಉಗ್ರರ ವಿರುದ್ಧ ಹೋರಾಡಲು ಈ ಸರ್ಜಿಕಲ್ ಸ್ಟ್ರೈಕ್ ನಡೆಯುತ್ತದೆ.
ಪ್ರಸಿದ್ಧ ಯಾಕೆ?
ಈ ಸರ್ಜಿಕಲ್ ದಾಳಿ ನಡೆಸುವ ಬಗ್ಗೆ ಶತ್ರುಗಳಿಗೆ ಯಾವುದೇ ಮಾಹಿತಿ ಇರುವುದಿಲ್ಲ. ಬಹುತೇಕ ಈ ರೀತಿಯ ದಾಳಿಗಳು ರಾತ್ರಿಯ ವೇಳೆ ನಡೆಯುತ್ತದೆ. ಭಾರತ ಈ ಹಿಂದೆ ಮ್ಯಾನ್ಮರ್ ಗಡಿಯನ್ನು ದಾಟಿ ಹೋಗಿ 40 ಉಗ್ರರನ್ನು ಸೆದೆ ಬಡಿದಿತ್ತು.
ಸವಾಲಿನ ಕೆಲಸ:
ಸಾಮಾನ್ಯವಾಗಿ ಯಾವುದೇ ದೇಶ ಮತ್ತೊಂದು ದೇಶದ ಒಳಗಡೆ ನುಗ್ಗಿ ಸರ್ಜಿಕಲ್ ದಾಳಿ ನಡೆಸಲು ಮುಂದಾಗುವುದಿಲ್ಲ. ಹೆಚ್ಚು ಕಡಿಮೆ ಏನಾದರೂ ಆದರೆ ದೇಶಕ್ಕೆ ಕೆಟ್ಟ ಹೆಸರು ಬರುತ್ತದೆ. ಅಷ್ಟೇ ಅಲ್ಲದೇ ವಿವಿಧ ದೇಶಗಳು ಸಹ ಗಮನಿಸುತ್ತಿರುತ್ತದೆ. ವಿರೋಧಿ ರಾಷ್ಟ್ರದ ಲಾಬಿ ಜೋರಾಗಿದ್ದರೆ ವಿಶ್ವದ ಮುಂದೆ ತಲೆತಗ್ಗಿಸಬೇಕಾಗುತ್ತದೆ. ಈ ಕಾರಣಕ್ಕೆ ಸರ್ಕಾರಗಳು ಸೇನೆಗಳಿಗೆ ಸರ್ಜಿಕಲ್ ದಾಳಿ ನಡೆಸಲು ಅನುಮತಿ ನೀಡುವುದಿಲ್ಲ.
ಭಾರತ ಯಶಸ್ವಿಯಾಗಿದ್ದು ಹೇಗೆ?
ಸೆ.18ರ ಉರಿಯ ಸೇನೆ ಕಚೇರಿ ಮೇಲಿನ ಉಗ್ರರ ದಾಳಿಯಿಂದ 18 ಮಂದಿ ಸೈನಿಕರು ಹುತಾತ್ಮರಾದ ಬಳಿಕ ಭಾರತೀಯ ಸೇನೆ ಗಡಿ ನಿಯಂತ್ರಣ ಮೇಲೆ ಮತ್ತಷ್ಟು ಹದ್ದಿನ ಕಣ್ಣನ್ನು ಇಟ್ಟಿತ್ತು. ಇದರ ಜೊತೆ ಗುಪ್ತಚರ ಸಂಸ್ಥೆ ‘ರಾ’ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಬಗ್ಗೆ ಪಕ್ಕಾ ಮಾಹಿತಿಯನ್ನು ನೀಡಿತ್ತು. ಈ ಮಾಹಿತಿಯ ಆಧಾರದಲ್ಲಿ ಸೇನೆಯ ವಿಶೇಷ ಕಮಾಂಡೋ ಪಡೆ ಬುಧವಾರ ರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 3 ಕಿ.ಮೀ ವ್ಯಾಪ್ತಿಯ ಪ್ರದೇಶಗಳಿಗೆ ಹೆಲಿಕಾಪ್ಟರ್ ಮೂಲಕ ನುಗ್ಗಿತು. ಬಿಂಬಿರ್, ಹಾಟ್‍ಸ್ಪ್ರಿಂಗ್, ಕೆಲ ಮತ್ತು ಲಿಪಾ ಸೆಕ್ಟರ್ ಮೇಲೆ ದಾಳಿ ನಡೆಸಿ 7 ಉಗ್ರ ನೆಲೆಗಳನ್ನು ಧ್ವಂಸ ಮಾಡಿ 38 ಉಗ್ರರು ಮತ್ತು 9 ಮಂದಿ ಸೈನಿಕರನ್ನು ಹತ್ಯೆ ಮಾಡಿ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಆಯ್ತು.
Comments are closed.