ಕರ್ನಾಟಕ

ಈಶ್ವರಪ್ಪ ನನ್ನ ಜೊತೆ ಬರಲಿ, ಅವರನ್ನು ಮುಖ್ಯಮಂತ್ರಿ ಮಾಡುತ್ತೇನೆ: ವರ್ತೂರ್ ಪ್ರಕಾಶ್

Pinterest LinkedIn Tumblr

varturಹಾವೇರಿ: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿ ಆಗುತ್ತೇನೆ ಎಂದರೇ ನಾನು ಅವರ ಜೊತೆ ಬರುತ್ತೇನೆ. ಅವರಿಗೆ ಮುಖ್ಯಮಂತ್ರಿ ಆಗುವ ಧೈರ್ಯ ಇಲ್ಲದಿದ್ದರೇ ಅವರು ನನ್ನ ಜೊತೆ ಬರಲಿ. ನಾನೇ ಅವರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ಲೇವಡಿ ಮಾಡಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಎಲ್ಲಿರುತ್ತಾರೋ ಅಲ್ಲಿ ನಮ್ಮ ಕುರುಬ ಸಮಾಜವಿರುತ್ತದೆ. ಕುರುಬ ಸಮಾಜ ಯಾವುದೇ ಪಕ್ಷಕ್ಕೆ ಸೀಮಿತವಲ್ಲ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು ಹೇಳಲು ಕೆ.ಎಸ್.ಈಶ್ವರಪ್ಪನವರಿಗೆ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ತಮ್ಮ ರಾಜಕೀಯ ಜೀವನದಲ್ಲಿ ಈಶ್ವರಪ್ಪ ಎಂದು ನಾನೊಬ್ಬ ಕುರುಬ ಸಮಾಜದವನು ಎಂದು ಎದ್ದೆ ತಟ್ಟಿ ಹೇಳಿಲ್ಲ. ಆದರೆ, ಬಿಜೆಪಿಯಲ್ಲಿನ ಆಂತರಿಕ ಕಲಹದ ಕುತಂತ್ರಕ್ಕಾಗಿ ಸಂಗೊಳ್ಳಿ ರಾಯಣ್ಣನ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ರಾಜ್ಯದಲ್ಲಿ ಕುರುಬ ಸಮಾಜದ್ದೇ ಆದ ಶಕ್ತಿ ಸಾಮರ್ಥ್ಯವಿದೆ. ಸಿಎಂ ಸಿದ್ದರಾಮಯ್ಯನವರು ಸ್ಫೂರ್ತಿದಾಯಕವಾಗಿ ಕುರುಬ ಸಮಾಜವನ್ನು ಮುನ್ನಡೆಸಿಕೊಂಡು ಹೋಗಿದ್ದಾರೆ. ಕುರುಬ ಸಮಾಜ ಒಡೆಯುವ ಕೆಲಸ ಮಾಡಬಾರದು. ಈ ಕೂಡಲೇ ಕೆ.ಎಸ್.ಈಶ್ವರಪ್ಪ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶವನ್ನು ಹಿಂಪಡೆಯಬೇಕು ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ಆಗ್ರಹಿಸಿದ್ದಾರೆ.

Comments are closed.