ನವದೆಹಲಿ: ಭಾರತೀಯ ಸೇನೆಯು ಬುಧವಾರ ರಾತ್ರಿ ಗಡಿ ನಿಯಂತ್ರಣ ರೇಖೆಯಾಚೆಗೆ ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ ಅಲ್ಲಿನ ಭಯೋತ್ಪಾದಕರ ನೆಲೆಗಳ ಮೇಲೆ ಸರ್ಜಿಕಲ್ ದಾಳಿಗಳನ್ನು ನಡೆಸಿದ್ದು, ಭಯೋತ್ಪಾದಕರಿಗೆ ಗಮನಾರ್ಹ ಪ್ರಮಾಣದ ಸಾವು ನೋವು ಉಂಟು ಮಾಡಿ, ದಿಟ್ಟ ಉತ್ತರ ನೀಡಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಅವಿತಿದ್ದ ಹಲವು ಉಗ್ರರ ವಿರುದ್ಧ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಸೇನಾ ಮುಖ್ಯಸ್ಥ ರಣ್ ಬೀರ್ ಸಿಂಗ್ ಹೇಳಿದ್ದಾರೆ. ಭಯೋತ್ಪಾದಕ ಗುಂಪುಗಳು ಭಾರತದೊಳಕ್ಕೆ ನುಸುಳಲು ಸಜ್ಜಾಗಿವೆ ಎಂಬ ನಿರ್ದಿಷ್ಟ ಗುಪ್ತಚರ ವರದಿಗಳನ್ನು ಆಧರಿಸಿ ಈ ಸರ್ಜಿಕಲ್ ದಾಳಿಯನ್ನು ನಡೆಸಲಾಯಿತು. ಹಲವು ಉಗ್ರರನ್ನು ಕೊಲ್ಲಲಾಗಿದ್ದು, ಅವರೊಂದಿಗಿದ್ದ ಹಲವರು ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಇದೀಗ ಮುಕ್ತಾಯಗೊಂಡಿದ್ದು ಭಾರತದ ಕಡೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಿದರು.
ಇದೇ ವೇಳೆ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ ರಣ್ ಬೀರ್ ಸಿಂಗ್ ಅವರು, ಯಾವುದೇ ರೀತಿಯ ಭಾರತ ವಿರೋಧಿ ಕಾರ್ಯಾಚರಣೆಗಳನ್ನು ಸೇನೆ ಸಹಿಸುವುದಿಲ್ಲ. ಅಕ್ರಮ ನುಸುಳುವಿಕೆಯಂತಹ ಘಟನೆಗಳು ನಡೆದರೆ ಖಂಡಿತಾ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಮೂಲಗಳ ಪ್ರಕಾರ ಕಳೆದ ರಾತ್ರಿ ನಡೆದ ಕಾರ್ಯಾಚರಣೆ ವೇಳೆ ಭಾರತೀಯ ಸೇನೆಯ ಕೆಲ ನಿರ್ಧಿಷ್ಟ ಸೈನಿಕರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಅಕ್ರಮಿತ ಕಾಶ್ಮೀರದ ಸುಮಾರು 3 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದುಬಂದಿದೆ. ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಗಡಿ ನಿಯಂತ್ರಣ ರೇಖೆ ಬಳಿಯ ಕೇಲ್ ಮತ್ತು ಭೀಮ್ ಬರ್ ಪ್ರದೇಶದಲ್ಲಿ ಸೀಮಿತ ದಾಳಿ ನಡೆಸಿದೆ. ಈ ವೇಳೆ ಸುಮಾರು 6 ಉಗ್ರ ಕ್ಯಾಂಪ್ ಗಳ ಮೇಲೆ ದಾಳಿ ಮಾಡಲಾಗಿದ್ದು, ಕ್ಯಾಂಪ್ ಸಂಪೂರ್ಣ ಧ್ವಂಸಗೊಂಡಿದೆ ಎಂದು ತಿಳಿದುಬಂದಿದೆ. ಉಗ್ರರು ಅಲ್ಲಿ ಮಾಡಿಕೊಂಡಿದ್ದ ಸಂಪೂರ್ಣ ಮೂಲಸೌಕರ್ಯಗಳು ಕೂಡ ಧ್ವಂಸವಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ರಾತ್ರಿ ನಡೆದ ಸೇನಾ ಕಾರ್ಯಾಚರಣೆಯ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರ ಪಾತ್ರವಿದೆ ಎಂದು ಹೇಳಲಾಗುತ್ತಿದ್ದು, ಅಜಿತ್ ಧೋವಲ್ ನಿರ್ದೇಶನದ ಮೇರೆಗೆ ರಾತ್ರಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಧೋವಲ್ ನಿರ್ದೇಶನದ ಮೇರೆಗೆ ಗಡಿ ನಿಯಂತ್ರಣ ರೇಖೆಯಲ್ಲಿರುವ ಉಗ್ರರ ಕ್ಯಾಂಪ್ ಗಳನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಅಪ್ರಚೋದಿತ ದಾಳಿಗಳಾದರೆ ಅದಕ್ಕೆ ಸಂಪೂರ್ಣ ಬಲದೊಂದಿಗೆ ಉತ್ತರ ನೀಡಿ ಎಂದು ಸೈನಿಕರಿಗೆ ಹೇಳಿದ್ದರು. ಇದರ ಬೆನ್ನಲ್ಲೇ ಕಳೆದ ರಾತ್ರಿ ಪಾಕಿಸ್ತಾನಿ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಇದೀಗ ಸ್ವತಃ ಸೇನಾ ಮುಖ್ಯಸ್ಥ ರಣ್ ಬೀರ್ ಸಿಂಗ್ ಅವರು ಸೈನಿಕ ಕಾರ್ಯಾಚರಣೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಭಾರತ ನಡೆಸಿದ ಈ ಕಾರ್ಯಾಚರಣೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, 18 ಯೋಧರ ಸಾವಿಗೆ ಕಾರಣವಾಗಿದ್ದ ಉರಿ ಉಗ್ರ ದಾಳಿ ಬಳಿಕ ಭಾರತೀಯ ಸೇನೆ ನಡೆಸಿದ ಪ್ರಮುಖ ಕಾರ್ಯಾಚರಣೆ ಇದಾಗಿದೆ.
ಈ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸೇನೆ ನುಗ್ಗಿ 20 ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಬಳಿಕ ಅದನ್ನು ಅಲ್ಲಗಳೆದಿದ್ದ ಸೇನಾಧಿಕಾರಿಗಳ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದರು. ಇದೀಗ ದಿಢೀರನೇ ಇಂದು ಸುದ್ದಿಗೋಷ್ಠಿ ನಡೆಸಿದ ಸೇನಾ ಮುಖ್ಯಸ್ಥ ರಣ್ ಬೀರ್ ಸಿಂಗ್ ಅವರು ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯಾಚರಣೆ ನಡೆಸಿ ಅಲ್ಲಿ ನಡೆಯುತ್ತಿದ್ದ ಉಗ್ರ ಚಟುವಟಿಗಳನ್ನು ನಿಯಂತ್ರಿಸಲಾಗಿದೆ ಎಂದು ಹೇಳಿದ್ದಾರೆ.