ನವದೆಹಲಿ: ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ತೀರ್ಪಿನ ಬಗ್ಗೆ ಲೋಕಸಭೆಯ ಕಲಾಪದಲ್ಲೂ ಗುರುವಾರ ಪ್ರತಿಧ್ವನಿಸಿತು. ಅಲ್ಲದೇ ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರ ನಡುವೆ ಜಟಾಪಟಿಗೂ ಕಾರಣವಾಯ್ತು.
ಲೋಕಸಭೆಯ ಕಲಾಪದಲ್ಲಿ ಬಿಜೆಪಿ ಸಂಸದ ಸುರೇಶ್ ಅಂಗಡಿ ಮಹದಾಯಿ ನ್ಯಾಯಾಧಿಕರಣದ ತೀರ್ಪಿನ ಕುರಿತು ಪ್ರಸ್ತಾಪಿಸಿ, ಇದರಿಂದಾಗಿ ಉತ್ತರಕರ್ನಾಟಕದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ಈ ವಿವಾದಕ್ಕೆ ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ಹಾಗೂ ಅವರ ಪಕ್ಷವೇ ಕಾರಣ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ್ ಹುಕ್ಕೇರಿ, ಧ್ರುವನಾರಾಯಣ್ ಸೇರಿದಂತೆ ಕಾಂಗ್ರೆಸ್ ಸಂಸದರು ಅಂಗಡಿ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ರಾಜಕೀಯದ ಪ್ರಶ್ನೆಯಲ್ಲ, ವಿವಾದ ಬಗೆ ಹರಿಸಲು ಪ್ರಧಾನಿ ಮೋದಿ ಮಧ್ಯ ಪ್ರವೇಶ ಮಾಡಬೇಕೆಂದು ಆಗ್ರಹಿಸಿದರು.
ಪ್ರಧಾನಿಯವರು ಗೋವಾ, ಮಹಾರಾಷ್ಟ್ರದ ಬಿಜೆಪಿ ನಾಯಕರ ಜೊತೆ ಮಾತನಾಡುತ್ತೇನೆ. ಅಲ್ಲಿನ ವಿರೋಧ ಪಕ್ಷಗಳ ಜೊತೆ ಕಾಂಗ್ರೆಸ್ ಮಾತನಾಡಬೇಕು ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್‍ನವರು ಈ ಪ್ರಯತ್ನವನ್ನು ಮಾಡಲಿಲ್ಲ ಎಂಬ ಸುರೇಶ್ ಅಂಗಡಿಯವರ ತಿರುಗೇಟು ಮತ್ತಷ್ಟು ಗದ್ದಲಕ್ಕೆ ಕಾರಣವಾಯ್ತು. ಬಳಿಕ ಸ್ಪೀಕರ್ ಅವರ ಮಧ್ಯಪ್ರವೇಶದಿಂದ ವಿಷಯವನ್ನು ತಿಳಿಗೊಳಿಸಿದರು.
-ಉದಯವಾಣಿ
Comments are closed.