ಅಂತರಾಷ್ಟ್ರೀಯ

ಚಾಲಕರಹಿತ ಬಸ್ಸೊಂದನ್ನು ಅಭಿವೃದ್ಧಿ ಪಡಿಸಿದ ಬೆಂಝ್

Pinterest LinkedIn Tumblr

bus1

ಗೂಗಲ್‌ ಸೇರಿದಂತೆ ವಿಶ್ವದ ವಿವಿಧ ಪ್ರಮುಖ ಕಂಪನಿಗಳು ಚಾಲಕ ರಹಿತ, ಸ್ವಯಂಚಾಲಿತ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿರುವುದು ಗೊತ್ತೇ ಇದೆ. ಇದೀಗ ಜಗತ್ತಿನ ಪ್ರಮುಖ ವಾಹನ ತಯಾರಿಕಾ ಕಂಪನಿ, ಜರ್ಮನಿಯ ಬೆಂಝ್ ಚಾಲಕರಹಿತ ಬಸ್ಸೊಂದನ್ನು ಅಭಿವೃದ್ಧಿ ಪಡಿಸಿದೆ. “ಫ್ಯೂಚರ್‌ ಬಸ್‌’ ಹೆಸರಲ್ಲಿ ಈ ಬಸ್ಸುಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಭವಿಷ್ಯದಲ್ಲಿ ನಗರ ಸಾರಿಗೆಗಳಲ್ಲಿ ಮಹತ್ವದ್ದಾಗಿರಲಿದೆ ಎಂದು ಬೆಂಝ್ ಹೇಳಿದೆ.

ಈ ಚಾಲಕ ರಹಿತ ಬಸ್ಸನ್ನು ಬೆಂಝ್ ನೆದರ್ಲೆಂಡ್‌ನ‌ಲ್ಲಿ ಪರೀಕ್ಷೆ ನಡೆಸುತ್ತಿದೆ. 20 ಕಿ.ಮೀ. ವಿಸ್ತಾರದಲ್ಲಿ ಈ ಬಸ್ಸಿನ ಪರೀಕ್ಷೆ ನಡೆಸಲಾಗಿದ್ದು, ಯಾವುದೇ ಪ್ರಮುಖ ದೋಷಗಳು ಕಂಡು ಬಂದಿಲ್ಲ. ಈ ಬಸ್ಸಿನಲ್ಲಿ ಚಾಲಕ ಇರುವುದಿಲ್ಲ. ಬದಲಿಗೆ ಬೆಂಝ್ನ ಮಾತೃಕಂಪನಿ ಡೈಲ್ಮೇರ್‌ ಅಭಿವೃದ್ಧಿ ಪಡಿಸಿದ “ಡೈಲ್ಮೇರ್‌ ಸಿಟಿ ಪೈಲಟ್‌ ಟೆಕ್ನಾಲಜಿ’ ಹೆಸರಿನ ಸ್ವಯಂಚಾಲಿತ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ. ಬಸ್ಸಿನಲ್ಲಿ ಸುಮಾರು 10 ಕ್ಯಾಮೆರಾಗಳಿದ್ದು, ರಾಡಾರ್‌ ವ್ಯವಸ್ಥೆಯನ್ನೂ ಹೊಂದಿದೆ. ಇದರಿಂದ ಬಸ್ಸು ಎಲ್ಲಿ ಹೋಗುತ್ತಿದೆ ಎಂಬ ಮಾಹಿತಿ ಪ್ರಯಾಣಿಕರಿಗೂ, ನಿಯಂತ್ರಕರಿಗೂ ತಿಳಿಯಲಿದೆ.

ಸಂಪೂರ್ಣ ಸ್ವಯಂಚಾಲಿತ ಬ್ರೇಕಿಂಗ್‌ ವ್ಯವಸ್ಥೆ, ಸಿಗ್ನಲ್‌ ಗಳಲ್ಲಿ ನಿಲ್ಲುವ ಸೆನ್ಸರ್‌ ವ್ಯವಸ್ಥೆಯನ್ನು ಈ ಬಸ್ಸು ಹೊಂದಿದೆ. ವಿಶೇಷವೆಂದರೆ ಈ ಬಸ್ಸಿನ ಹೊರಗಡೆ ಲೈಟ್‌ನ ಉದ್ದನೆಯ ಪಟ್ಟಿ ಇದ್ದು ಅದು ಚಾಲಕ ರಹಿತವಾಗಿ ಸಂಚರಿಸುತ್ತಿದೆಯೇ?, ಅಥವಾ ಅರೆ ಸ್ವಯಂಚಾಲಿತವಾಗಿ ಚಲಿಸುತ್ತಿದೆಯೇ?, ಅಥವಾ ಚಾಲಕನ ನೆರವಿನಿಂದ ಸಂಚರಿಸುತ್ತಿದೆಯೇ ಎಂಬುದನ್ನು ಹೇಳುತ್ತದೆ.

ಎರಡು ಬಾಗಿಲುಗಲು ಇದರಲ್ಲಿದ್ದು, ಸಂಪೂರ್ಣ ಸ್ವಯಂಚಾಲಿತ. ಜೊತೆಗೆ ಬಸ್ಸಿನಲ್ಲಿ ಮೂರು ಮಾದರಿಯಲ್ಲಿ ಕೂರುವಿಕೆಗೆ ಅವಕಾಶವಿದೆ. ಕಡಿಮೆ ದೂರದವರು, ಸಾಮಾನ್ಯ ದೂರದವರು ಮತ್ತು ತುಂಬ ದೂರಕ್ಕೆ ಸಂಚರಿಸುವವರು ಬೇರೆ ಬೇರೆ ಸ್ಥಳಗಳಲ್ಲಿ ಕೂರಬಹುದು. ಅಷ್ಟೇ ಅಲ್ಲ ಟೀವಿ ನೋಡಬಹುದು. ಸುಸ್ತಾದರೆ ಮಲಗಲೂ ಅವಕಾಶವಿದೆ! ಇದರಿಂದ ನೂಕುನುಗ್ಗಲು ತಪ್ಪಿಸುವ ವ್ಯವಸ್ಥೆಯನ್ನು ಇದು ಹೊಂದಿದೆ. ಗಂಟೆಗೆ 70 ಕಿ.ಮೀ. ವೇಗದವರೆಗೆ ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಈ ಬಸ್ಸು ಸಂಚರಿಸುವ ಸಾಮರ್ಥ್ಯ ಹೊಂದಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಇರಾದೆಯನ್ನು ಬೆಂಝ್ ಹೊಂದಿದೆ.

Comments are closed.