ರಾಷ್ಟ್ರೀಯ

ಮೋದಿ ಕರೆದ ಸಿಎಂಗಳ ಸಭೆಗೆ ಮೊಬೈಲ್ ತಗೊಂಡು ಹೋಗಲೂ ಬಿಟ್ಟಿಲ್ಲ!

Pinterest LinkedIn Tumblr

Modiನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದಿದ್ದ ಅಂತರ್ ರಾಜ್ಯ ಮುಖ್ಯಮಂತ್ರಿಗಳ ಸಭೆಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಲು ನನಗೆ ಅವಕಾಶ ಕೊಡದೆ ಅದನ್ನು ಹೊರಗಡೆ ಇಟ್ಟು ಹೋಗುವಂತೆ ಸೂಚಿಸಿರುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಮೋದಿ ಅವರು ಜುಲೈ 16ರಂದು ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ, ಅಂತರ ರಾಜ್ಯ ಸಂಬಂಧಗಳು, ಆಂತರಿಕ ಭದ್ರತೆ ಹಾಗೂ ಎಸ್ ಸಿ, ಎಸ್ ಟಿಯ ಆಟ್ರೊಸಿಟಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದರು.

ಕೆಲವು ಆಯ್ದ ಮುಖ್ಯಮಂತ್ರಿಗಳು ಸೇರಿದಂತೆ ನನಗೆ (ಕೇಜ್ರಿವಾಲ್) ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾಜರ್ಜಿಗೆ ಮೊಬೈಲ್ ಫೋನ್ ಅನ್ನು ಹೊರಗೆ ಇಡುವಂತೆ ಸೂಚಿಸಲಾಗಿತ್ತು. ಈ ಸಂದರ್ಭದಲ್ಲಿ ಮಮತಾಜೀ ಪ್ರತಿಭಟಿಸಿ, ಒಂದು ವೇಳೆ ನಾನು ಮೊಬೈಲ್ ಅನ್ನು ಹೊರಗೆ ಇಟ್ಟು ಸಭೆಗೆ ಹೋದರೆ, ಬಂಗಾಳದಲ್ಲಿ ಏನಾದರು ತುರ್ತಾಗಿ ಸಂಭವಿಸಿದ್ದ ಘಟನೆ ನನಗೆ ಹೇಗೆ ತಿಳಿಯಬೇಕೆಂದು ಪ್ರಶ್ನಿಸಿದ್ದರು. ಕೊನೆಗೆ ಮಮತಾ ಅವರಿಗೆ ಮೊಬೈಲ್ ಕೊಂಡೊಯ್ಯಲು ಅವಕಾಶ ನೀಡಲಾಯಿತು. ಆದರೆ ನನಗೆ ಅವಕಾಶ ಕೊಟ್ಟಿಲ್ಲ ಎಂದು ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.

ಕೇಜ್ರಿವಾಲ್ ಅವರ ಐಐಟಿ ಸಹಪಾಠಿ, ಆತ್ಮೀಯ ಸ್ನೇಹಿತ ಪ್ರಾಣ್ ಕರೂಪ್ ಬರೆದಿರುವ ‘Arvind Kejriwal and The Aam Aadmi Party — An Inside Look’ ಪುಸ್ತಕ ಬಿಡುಗಡೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ದೆಹಲಿಯ ಜನತೆ ನನ್ನಿಂದಾಗಿ ತೊಂದರೆ ಅನುಭವಿಸುತ್ತಿಲ್ಲ, ಅದೇ ರೀತಿ ಗೋವಾ, ಪಂಜಾಬ್ ಗಳಲ್ಲೂ ಕೂಡಾ. ಆದರೆ ನಮಗೆ ಅವರು(ಕೇಂದ್ರ ಸರ್ಕಾರ) ಕೆಲಸ ಮಾಡಲು ಬಿಡುತ್ತಿಲ್ಲ. ನಮ್ಮ ಎಲ್ಲಾ ನಿರ್ಧಾರಗಳನ್ನು ತಡೆಹಿಡಿಯುವ ಮೂಲಕ ಅಡ್ಡಿಪಡಿಸುತ್ತಿರುವುದಾಗಿ ಕೇಜ್ರಿವಾಲ್ ಈ ಸಂದರ್ಭದಲ್ಲಿ ಆರೋಪಿಸಿದರು.
-ಉದಯವಾಣಿ

Comments are closed.