ಮನೋರಂಜನೆ

ಭೂಗತ ಪುಟಗಳಲ್ಲಿ ಶಿವಮಣಿ, ಶೇಷಾದ್ರಿ ನಟನೆ

Pinterest LinkedIn Tumblr

shivamani“ಸಿಂಹಾದ್ರಿ’ ಚಿತ್ರದ ನಂತರ ನಿರ್ದೇಶನದಿಂದ ದೂರವೇ ಇದ್ದ ಶಿವಮಣಿ, ಈಗ ಮತ್ತೆ ವಾಪಸ್ಸಾಗುತ್ತಿದ್ದಾರೆ. ಉಪೇಂದ್ರ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸಿರುವ ಯೋಚನೆಯಲ್ಲಿರುವ ಶಿವಮಣಿ, ಈಗ ಬಹಳ ದಿನಗಳ ನಂತರ ನಟನೆಯತ್ತ ವಾಪಸ್ಸಾಗಿದ್ದಾರೆ. ಅವರಿಗೆ ನಟನೆ ಹೊಸದೇನಲ್ಲ. “ಲವ್‌ ಯು’ ಎಂಬ ಚಿತ್ರದಲ್ಲಿ ಅವರು ಹೀರೋ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆ ನಂತರ “ಖಾಕಿ’, “ಅಶೋಕ’ ಮತ್ತು “ಬೆಳ್ಳಿ ಬೆಟ್ಟ’ ಚಿತ್ರಗಳಲ್ಲಿ ಅವರು ನಟಿಸಿದ್ದರು. ಈಗ ಶಿವಮಣಿ ಬಹಳ ದಿನಗಳ ನಂತರ ಪುನಃ ಬಣ್ಣ ಹಚ್ಚಿದ್ದಾರೆ. ಈ ಬಾರಿ ಅವರು “ಭೂಗತ ಪುಟಗಳಲ್ಲಿ’ ಎಂಬ ಚಿತ್ರದಲ್ಲಿ ಪ್ರಮುಖವಾದ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

ರವಿ ಶ್ರೀವತ್ಸ ಬರೆದು-ನಿರ್ದೇಶಿಸುತ್ತಿರುವ “ಭೂಗತ ಪುಟಗಳಲ್ಲಿ’ ಚಿತ್ರವು ಸೋಮವಾರದಿಂದ ಬಾಗಲಕೋಟೆಯಲ್ಲಿ ಪ್ರಾರಂಭವಾಗಿದೆ. ಹೆಸರೇ ಹೇಳುವಂತೆ ಇದು ಭೂಗತ ಲೋಕದ ಕುರಿತಾದ ಚಿತ್ರ. ಅದರಲ್ಲೂ ಉತ್ತರ ಕರ್ನಾಟಕದ ಎರಡು ಕುಟುಂಬಗಳ ಅಥವಾ ಎರಡು ಗ್ಯಾಂಗ್‌ಗಳ ಸೇಡಿನ ಕುರಿತ ಚಿತ್ರ. ಅಲ್ಲಿನ ಕೈಮ್‌ ಜಗತ್ತಿನ ಸುತ್ತಸುತ್ತವ ಈ ಕಥೆಯಲ್ಲಿ ಯಾವುದೇ ಹೀರೋಗಳಿಲ್ಲವಂತೆ. ಕಥೆಯೇ ಇಲ್ಲಿ ಹೀರೋ. ಉತ್ತರ ಕರ್ನಾಟಕದ ಭಾಷೆಯ ಮತ್ತು ಸೊಗಡಿನ ಈ ಚಿತ್ರದಲ್ಲಿ ಸಾಕಷ್ಟು ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರಂತೆ. ಶಿವಮಣಿ ಜೊತೆಗೆ ನಿರ್ದೇಶಕರಾದ ಪಿ. ಶೇಷಾದ್ರಿ, ಅಯ್ಯಪ್ಪ, ವಿಕ್ಟರಿ ವಾಸು, ನಿರ್ಮಾಪಕರಾದ ಎನ್‌. ಎಂ. ಸುರೇಶ್‌, ಉಮೇಶ್‌ ಬಣಕಾರ್‌, ಕರ್ನಾಟಕಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಸುಷ್ಮಾ ವೀರ್‌ ಸೇರಿದಂತೆ ಹಲವರು ನಟಿಸುತ್ತಿದ್ದಾರಂತೆ. ಬಾಗಲಕೋಟೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮುಂತಾದ ಕಡೆ ಒಂದೇ ಹಂತದ ಚಿತ್ರೀಕರಣದಲ್ಲಿ ಚಿತ್ರ ಮುಗಿಯುವ ಸಾಧ್ಯತೆ ಇದೆ.

ಈ ಚಿತ್ರದಲ್ಲಿ ಶಿವಮಣಿ ಎರಡು ಗ್ಯಾಂಗ್‌ಗಳ ಪೈಕಿ, ಒಂದು ಗ್ಯಾಂಗ್‌ನ ಮುಖ್ಯಸ್ಥನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರ ಒಪ್ಪಿಕೊಳ್ಳೋಕೆ ಕಾರಣ ಪಾತ್ರವೇ ಎಂಬ ಉತ್ತರ ಅವರಿಂದ ಬರುತ್ತದೆ. “ನಾನು ಅಭಿನಯ ಮಾಡಿ ಹಲವು ವರ್ಷಗಳಾಗಿದ್ದವು. ಎಷ್ಟೋ ನಿರ್ಮಾಪಕರು ಚಿತ್ರದಲ್ಲಿ ನಟಿಸುವುದಕ್ಕೆ ಹೇಳುತ್ತಲೇ ಇದ್ದರು. ಆದರೆ, ಯಾಕೋ ಕಿಕ್‌ ಕೊಡುವಂತಹ ಪಾತ್ರ ಯಾವುದೂ ಸಿಗಲಿಲ್ಲ. ರವಿ ಈ ಕಥೆ ಮತ್ತು ನನ್ನ ಪಾತ್ರ ಹೇಳಿದಾಗ ಬಹಳ ಇಷ್ಟವಾಯ್ತು. ಹಾಗಾಗಿ ಒಪ್ಪಿಕೊಂಡೆ. ಇನ್ನು ಮುಂದೆ ಇಂತಹ ಪಾತ್ರಗಳು ಸಿಕ್ಕರೆ, ನಟನೆಯಲ್ಲೂ ಮುಂದುವರೆಯುತ್ತೇನೆ. ಅದರ ಜೊತೆಗೆ ನಿರ್ದೇಶನ ಸಹ ಮುಂದುವರೆಸಿಕೊಂಡು ಹೋಗುತ್ತೀನಿ’ ಎನ್ನುತ್ತಾರೆ ಅವರು.

ಈ ಚಿತ್ರವನ್ನು ಸುಷ್ಮಾ ವೀರ್‌ ನಿರ್ಮಿಸುತ್ತಿದ್ದು, ಗಿರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
-ಉದಯವಾಣಿ

Comments are closed.