ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ ತೀವ್ರವಾಗುತ್ತಿದ್ದು, ಬಿಜೆಪಿ ನಾಯಕರೊಬ್ಬರು ವೇಶ್ಯೆಗೆ ಹೋಲಿಸಿದ್ದಕ್ಕೆ ಕಟುವಾಗಿಯೇ ಪ್ರತಿಕ್ರಿಯಿಸಿರುವ ಬಿಎಸ್ಪಿ ನಾಯಕಿ ಮಾಯಾವತಿ ಅವರು, ಇದು ಬಿಜೆಪಿಯ ಹತಾಶೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಇಂದು ಸಂಸತ್ ಭವನದ ಹೊರಗೆ ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಯಾವತಿ, ರಾಜ್ಯದಲ್ಲಿ ತಮ್ಮ ಪಕ್ಷಕ್ಕೆ ಜನ ಬೆಂಬಲ ಹೆಚ್ಚುತ್ತಿದೆ. ಇದರಿಂದ ಭ್ರಮ ನಿರಸನಗೊಂಡಿರುವ ಬಿಜೆಪಿ ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಗುಜರಾತ್ ದಲಿತ ಯುವಕನ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ನಿದ್ದೆಗೆ ಜಾರಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ ಮಾಯಾವತಿ, ಇದು ದಲಿತರ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಹುಲ್ ಎಷ್ಟು ಗಂಭೀರವಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದರು.
ಕೊನೆ ಕ್ಷಣದಲ್ಲಿ ದಲಿತ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಸಹ ಬಿಎಸ್ಪಿ ನಾಯಕಿ ಆರೋಪಿಸಿದರು.
ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿದ್ದ ಬಿಜೆಪಿ ಉಪಾಧ್ಯಕ್ಷ ದಯಾಶಂಕರ ಸಿಂಗ್ ಅವರು ಒಬ್ಬ ವೇಶ್ಯೆಗೆ ಹಣ ನೀಡಿದರೆ ತನ್ನ ಬದ್ಧತೆಯನ್ನು ಈಡೇರಿಸುತ್ತಾಳೆ. ಆದರೆ ಮಾಯಾವತಿ ಹಾಗಲ್ಲ. ಯಾರೂ ಹೆಚ್ಚಿಗೆ ಹಣ ನೀಡುತ್ತಾರೋ ಅವರಿಗೆ ಟಿಕೆಟ್ ನೀಡುತ್ತಾರೆ. ಹೀಗಾಗಿ ಅವರು ಒಬ್ಬ ವೇಶ್ಯೆಗಿಂತಲೂ ಕಡೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
Comments are closed.