ರಾಷ್ಟ್ರೀಯ

“ಬಾಬರಿ ಮಸೀದಿ ಧ್ವಂಸ ಪಿವಿಎನ್‌ ಬಹುದೊಡ್ಡ ವೈಫ‌ಲ್ಯ”

Pinterest LinkedIn Tumblr

PVN-700ಹೊಸದಿಲ್ಲಿ : ಮಾಜಿ ಪ್ರಧಾನಿ ಪಿ. ವಿ. ನರಸಿಂಹ ರಾವ್‌ ಅವರ ‘ಹಿಂದು-ಪರ ಮನೋಭಾವ’ವೇ 1992ರಲ್ಲಿ ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಧ್ವಂಸಕ್ಕೆ ಪ್ರೇರಕವಾಯಿತು ಎಂದು ಹಿರಿಯ ಕಾಂಗ್ರೆಸ್‌ ನಾಯಕ ಮಣಿ ಶಂಕರ್‌ ಅಯ್ಯರ್‌ ಹೇಳಿದ್ದಾರೆ.

ಲೇಖಕ ವಿನಯ ಸೀತಾಪತಿ ಅವರು ಬರೆದಿರುವ “ಹೌ ಪಿ ವಿ ನರಸಿಂಹರಾವ್‌ ಟ್ರಾನ್ಸ್‌ಫಾರ್ಮ್ಡ್‌ ಇಂಡಿಯಾ’ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಯ್ಯರ್‌ ಮಾತನಾಡುತ್ತಿದ್ದರು.

ಅಯ್ಯರ್‌ ಮಾತ್ರವಲ್ಲದೆ ನರಸಿಂಹ ರಾವ್‌ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದ ಕಾಂಗ್ರೆಸ್‌ ನಾಯಕ ನಟವರ್‌ ಸಿಂಗ್‌ ಸಹಿತವಾಗಿ ಅನೇಕ ನಾಯಕರು ಈ ಸಂದರ್ಭದಲ್ಲಿ ಮಾತನಾಡಿ 1992ರ ಡಿಸೆಂಬರ್‌ 6ರಂದು ಆಯೋಧ್ಯೆಯಲ್ಲಿ ನಡೆದಿದ್ದ ಬಾಬರಿ ಮಸೀದಿ ಧ್ವಂಸವು ನರಸಿಂಹ ರಾವ್‌ ಅವರ ಅತ್ಯಂತ ದೊಡ್ಡ ವೈಫ‌ಲ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಹಾಗಿದ್ದರೂ ರಾವ್‌ ಅವರು ತಮ್ಮ ಆಡಳಿತಾವಧಿಯಲ್ಲಿ ದೇಶದಲ್ಲಿ ಅತ್ಯಂತವಾಗಿ ಅಗತ್ಯವಿದ್ದ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಅನೇಕ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದರು ಎಂಬುದನ್ನು ನೆನಪಿಸಿಕೊಂಡು ಶ್ಲಾಘನೆಯ ಮಾತುಗಳನ್ನು ಆಡಿದರು.

ಸಾಧುಗಳು ಮತ್ತು ಸಂತರೊಡನೆ ಮಾತುಕತೆ – ಸಂವಾದ ನಡೆಸುವ ಮೂಲಕ ಆಯೋಧ್ಯೆಯ ರಾಮ ಮಂದಿರ ಪ್ರಶ್ನೆಯನ್ನು ಬಗೆಹರಿಸುವುದು ಸಾಧ್ಯವೆಂಬುದನ್ನು ರಾವ್‌ ಅವರಿಗೆ ಸಂಪೂರ್ಣವಾಗಿ ಮನವರಿಕೆ ಮಾಡಲಾಗಿತ್ತು ಎಂದು ಅಯ್ಯರ್‌ ಅಭಿಪ್ರಾಯಪಟ್ಟರು.

1992ರ ನವೆಂಬರ್‌ 14ರಂದು ತಾನು ಶಾಂತಿ ಮತ್ತು ಕೋಮು ಸಾಮರಸ್ಯಕ್ಕಾಗಿ ಕೈಗೊಂಡಿದ್ದ ರಾಮ್‌ ರಹೀಮ್‌ ಯಾತ್ರೆಯನ್ನು ಫೈಜಾಬಾದ್‌ನಲ್ಲಿ ತಡೆಹಿಡಿಯಲಾಯಿತು ಮತ್ತು ಅಲ್ಲಿ ತನ್ನನ್ನುಉತ್ತರ ಪ್ರದೇಶ ಪೊಲೀಸರು ಬಂಧಿಸಿದರು ಎಂದು ಅಯ್ಯರ್‌ ನೆನಪಿಸಿಕೊಂಡರು.

“ಆ ಸಂದರ್ಭದಲ್ಲಿ ರಾವ್‌ ಅವರು ನನ್ನನ್ನು ಕರೆಸಿಕೊಂಡು ನಿಮ್ಮ ರಾಮ ರಹೀಮ್‌ ಯಾತ್ರೆಯಿಂದ ನನಗೇನೂ ತೊಂದರೆಯಿಲ್ಲ. ಆದರೆ ಭಾರತದಂತಹ ಹಿಂದೂ ಬಹುಸಂಖ್ಯಾಕ ದೇಶದಲ್ಲಿ ನಿಮ್ಮ ಜಾತ್ಯತೀತ ವ್ಯಾಖ್ಯೆಯನ್ನು ನಾನು ಒಪ್ಪಲಾರೆ ಎಂದು ನನಗೆ ಹೇಳಿದ್ದರು. ಆಗ ರಾವ್‌ ಅವರಿಗೆ ನಾನು ಹೇಳಿದ್ದೆ : ನಿಮ್ಮ ಈ ಮಾತು ಬಿಜೆಪಿಯ ವಾದದಂತೆಯೇ ಇದೆ’ ಎಂದು ಅಯ್ಯರ್‌ ಅಂದಿನ ವಿದ್ಯಮಾನಗಳನ್ನು ಉಲ್ಲೇಖೀಸಿದರು.

ಬೆಂಗಳೂರಿನ ನ್ಯಾಶನಲ್‌ ಲಾ ಸ್ಕೂಲ್‌ ಹಾಗೂ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಕಲಿತಿರುವ ಕೃತಿಕಾರ ಸೀತಾಪತಿ ಅವರು ಮಾತನಾಡಿ “ಬಾಬರಿ ಮಸೀದಿ ಧ್ವಂಸಕ್ಕೆ ಕಾರಣವಾದ ಅಂದಿನ ಸ್ಥಿತಿಗತಿಯನ್ನು ಸರಿಯಾಗಿ ಪರಿಭಾವಿಸುವಲ್ಲಿ ಮಾತ್ರವೇ ರಾವ್‌ ತಪ್ಪೆಸಗಿದರು; ಆದರೆ ಬಾಬರಿ ಮಸೀದಿ ಧ್ವಂಸಕ್ಕೆ ರಾವ್‌ ಪರೋಕ್ಷವಾಗಿ ಸಂಚು ಹೂಡಿದ್ದರೆಂಬುದು ಮಾತ್ರ ಕಾಂಗ್ರೆಸ್‌ ಸೃಷ್ಟಿಸಿದ ಕತೆಯಾಗಿದೆ’ ಎಂದು ಹೇಳಿದರು.
-ಉದಯವಾಣಿ

Comments are closed.