ರಾಷ್ಟ್ರೀಯ

“ಪ್ರಜಾಪ್ರಭುತತ್ವವೇ ನಮ್ಮ ಬಲ ,ಅದರ ರಕ್ಷಣೆ ನಮ್ಮೆಲ್ಲರ ಹೊಣೆ” : ಪ್ರಧಾನಿ ಮೋದಿ

Pinterest LinkedIn Tumblr

mann-ki-baat

ನವದೆಹಲಿ: ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮನ್ ಕಿ ಬಾತ್ ರೇಡಿಯೋ ಭಾಷಣ ಆರಂಭಿಸಿದ ನರೇಂದ್ರ ಮೋದಿ ಇಂದು ತಮ್ಮ 21ನೆ ಆವೃತ್ತಿಯ ಮನದ ಮಾತನ್ನು ತೆರೆದಿಟ್ಟರು. ಪ್ರಜಾಪ್ರಭುತ್ವವೇ ನಮ್ಮ ಬಲ. ನಾವು ಸದಾ ಈ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳಲು ಶ್ರಮಿಸಬೇಕು ಮತ್ತು ಜಾಗೃತರಾಗಿರಬೇಕು ಎಂದು ಪ್ರಧಾನಿ ಕರೆ ನೀಡಿದರು. ಕಪ್ಪು ಹಣದ ಬಗ್ಗೆ ಪ್ರಸ್ತಾಪಿಸಿದ ಮೋದಿ, ಪ್ರತಿಯೊಬ್ಬರೂ ತಮ್ಮ ಕಪ್ಪು ಹಣದ ಬಗ್ಗೆ ಬಹಿರಂಗಪಡಿಸುವಂತೆ ಕಪ್ಪು ಹಣ ಕುಳಗಳನ್ನು ಆಗ್ರಹಿಸಿದರು.

ಮುಂದೆ ಬರಬಹುದಾದ ಯಾವುದೇ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಅವರಿಗೆ ಇದು ಕೊನೆಯ ಅವಕಾಶ ಎಂದೂ ಅವರು ಹೇಳಿದರು. ಸೆ.30ರೊಳಗೆ ಕಪ್ಪು ಹಣ ಘೋಷಿಸಿದವರು ತೊಂದರೆಗೆ ಸಿಲುಕುವುದು ಖಚಿತ ಎಂದು ಎಚ್ಚರಿಸಿದರು. ಈ ವರ್ಷದ ಮುಂಗಾರು ಆರಂಭದಲ್ಲಿ ದೇಶಾದ್ಯಂತ ಉತ್ತಮ ಮಳೆಯಾಗುತ್ತಿರುವ ಬಗ್ಗೆ ಸುದ್ದಿಗಳು ಬರುತ್ತಿವೆ. ಎಲ್ಲ ರೈತರೂ ಈ ಅವಕಾಶ ಸದ್ಬಳಕೆ ಮಾಡಿಕೊಳ್ಳುತ್ತಾರೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನಮ್ಮ ರೈತರಂತೆ ವಿಜ್ಞಾನಿಗಳೂ ಕೂಡ ಶ್ರಮಿಸುತ್ತಿದ್ದಾರೆ ಎಂದು ಹೇಳಿದ ಪ್ರಧಾನಿ, ಇಸ್ರೋ ವಿಜ್ಞಾನಿಗಳನ್ನು ಶ್ಲಾಘಿಸಿದರು. ಒಂದೇ ಬಾರಿಗೆ 20 ಉಪಗ್ರಹಗಳನ್ನು ಉಡಾಯಿಸಿದ ವಿಜ್ಞಾನಿಗಳು ಅಭಿನಂದನೀಯರು ಎಂದು ಕೃತಜ್ಞತೆ ಸಲ್ಲಿಸಿದರು. ಬೇಟಿ ಬಚಾವೊ, ಬೇಟಿ ಪಢಾವೊ ಯೋಜನೆ ಒಳ್ಳೆಯ ಕೆಲಸ ಮಾಡಿದೆ ಎಂದ ಅವರು, ಯುದ್ಧ ವಿಮಾನ ಪೈಲಟ್‌ಗಳಾಗಿ ವಾಯುಪಡೆಗೆ ಸೇರ್ಪಡೆಯಾದ ಅವನಿ ಚತುರ್ವೇದಿ, ಭಾವನಾಕಾಂತ್ ಮತ್ತು ಮೋಹನಾಸಿಂಗ್ ಅವರನ್ನು ಅಭಿನಂದಿಸಿದರು.

ಯೋಗದ ಬಗ್ಗೆ ದೇಶದ ಜನರು ತಾಳಿರುವ ಒಳ್ಳೆಯ ಭಾವನೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು, ಯೋಗದಿಂದ ಮಧುಮೇಹವನ್ನು ಮೆಟ್ಟಿ ನಿಲ್ಲಬೇಕಾಗಿದೆ ಎಂದರು. ಮನ್ ಕಿ ಬಾತ್ ಬಗ್ಗೆ ಟೀಕೆಗಳು ಬರುತ್ತಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ, ಪ್ರಜಾಪ್ರಭುತ್ವದಲ್ಲಿ ಇವೆಲ್ಲ ಸಾಧ್ಯ. 1975ರ ತುರ್ತು ಪರಿಸ್ಥಿತಿಯನ್ನು ಸ್ಮರಿಸಬೇಕು. My gow.in ಮೂಲಕ ಎಲ್ಲರೂ ನನಗೆ ಆಡಳಿತದಲ್ಲಿ, ಯೋಜನೆಗಳನ್ನು ರೂಪಿಸುವಲ್ಲಿ ಸಲಹೆಗಳನ್ನು ನೀಡಬಹುದು ಎಂದರು. ಸರ್ಕಾರದ ವೆಬ್ ಮೂಲಕ ಗ್ರಾಮೀಣ ನಿರುದ್ಯೋಗ ನಿವಾರಣೆಗೆ ಹೆಚ್ಚಿನ ಅನುಕೂಲವಾಗಲಿದೆ. 125 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಕೇವಲ 50 ಲಕ್ಷ ರೂ.ಗಳಿಗಿಂತ ಹೆಚ್ಚು ಆದಾಯ ಹೊಂದಿ ತೆರಿಗೆ ಪಾವತಿಸುವವರು ಕೇವಲ 1.5 ಲಕ್ಷ ಜನ.

ನಿನ್ನೆ ನಾನು ನಿವೃತ್ತ ಸರ್ಕಾರಿ ಉದ್ಯೋಗಿ ಚಂದ್ರಕಾಂತ್ ಕುಲಕರ್ಣಿ ಎಂಬುವವರನ್ನು ಭೇಟಿ ಮಾಡಿದ್ದೆ. ಅವರು ತಮ್ಮ ಪಿಂಚಣಿಯ ಮುಕ್ಕಾಲು ಭಾಗವನ್ನು ಸ್ವಚ್ಛ ಭಾರತ ಯೋಜನೆಗಾಗಿ ಕೊಡುತ್ತಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಹೇಳಿ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ನೀರು ಅತ್ಯಂತ ಅಮೂಲ್ಯ ಎಂಬುದನ್ನು ನಾನು ಮತ್ತೊಮ್ಮೆ ದೇಶದ ಜನತೆಯ ಗಮನಕ್ಕೆ ತರಬಯಸುತ್ತೇನೆ ಎಂದ ಅವರು, 1922ಕ್ಕೆ ಮಿಸ್ಡ್‌ಕಾಲ್ ಕೊಡುವ ಮೂಲಕ ದೇಶದ ಪ್ರತಿಯೊಬ್ಬರೂ ಅವರಿಗೆ ಬೇಕಾದ ಭಾಷೆಯಲ್ಲಿ ಮನ್ ಕಿ ಬಾತ್ ಆಲಿಸಬಹುದು ಎಂದು ಸೂಚಿಸಿದರು.

Comments are closed.